ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 2024 – 25 ನೇ ಆರ್ಥಿಕ ವರ್ಷದಲ್ಲಿ 12,000 ಕ್ಕೂ ಅಧಿಕ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ, ಈ ಪೈಕಿ ಶೇಕಡ 85ರಷ್ಟು ಇಂಜಿನಿಯರಿಂಗ್ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
12 ಸಾವಿರಕ್ಕೂ ಅಧಿಕ ಉದ್ಯೋಗಗಳ ಪೈಕಿ 3,000 ಕ್ಕೂ ಹೆಚ್ಚು ಪ್ರೊಬೇಷನರಿ ಅಧಿಕಾರಿಗಳು ಮತ್ತು 8,000ಕ್ಕೂ ಹೆಚ್ಚು ಸಹಾಯಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ ಅವರು, ಆಯ್ಕೆಯಾದ ಉದ್ಯೋಗಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಅಗತ್ಯ ತರಬೇತಿ ನೀಡಿದ ಬಳಿಕ ಕೆಲಸಕ್ಕೆ ನಿಯೋಜಿಸಲಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ನೂರಾರು ಇಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿ ವರ್ಷ ಅತಿ ಹೆಚ್ಚು ಸಂಖ್ಯೆಯಲ್ಲಿ ಪದವೀಧರರು ಹೊರ ಬರುತ್ತಿದ್ದು, ಆದರೆ ಐಟಿ ಕ್ಷೇತ್ರದಲ್ಲಿ ಅದಕ್ಕೆ ತಕ್ಕಂತೆ ಉದ್ಯೋಗಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ ಎಂದು ಹಲವು ತಜ್ಞರು ಹೇಳಿದ್ದಾರೆ.