ಈ ಬಾರಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿ ಅತ್ಯುತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಜೆಡಿಎಸ್ ನಾಯಕರಿಗೆ ಈಗ ಹೊರ ಬಿದ್ದಿರುವ ಫಲಿತಾಂಶ ತೀವ್ರ ನಿರಾಸೆಯನ್ನು ಉಂಟು ಮಾಡಿದೆ. ಕೇವಲ 19 ಸ್ಥಾನಗಳನ್ನು ಮಾತ್ರ ಪಡೆಯಲು ಜೆಡಿಎಸ್ ಯಶಸ್ವಿಯಾಗಿದ್ದು, ಅಧಿಕೃತ ಪಕ್ಷದ ಸ್ಥಾನಮಾನಕ್ಕೂ ಕುತ್ತು ಬಂದಿದೆ.
ಇದರ ಮಧ್ಯೆ ಈ ಬಾರಿಯ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಚೆಲುವರಾಯಸ್ವಾಮಿ, ದೇವೇಗೌಡರು ನನ್ನ ತಂದೆ ಆಗಿದ್ದರೆ ಕೂತಿದ್ದ ಕಡೆಯೇ ಅವರನ್ನು ಸುಖವಾಗಿ, ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತಿದ್ದೆ ಎಂದಿದ್ದಾರೆ.
ಆರೋಗ್ಯ ಸಮಸ್ಯೆ ಇರುವ ದೇವೇಗೌಡರನ್ನು ಈ ವಯಸ್ಸಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸುತ್ತಾಡಿಸಿದ್ದು ತಪ್ಪು ಎಂದು ಹೇಳಿರುವ ಚೆಲುವರಾಯಸ್ವಾಮಿ, ಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಕೂತಿದ್ದ ಕಡೆಯೇ ಎಲ್ಲರೂ ಆಶೀರ್ವಾದ ಪಡೆದುಕೊಂಡು ಬರಬೇಕಿತ್ತು. ಅವರನ್ನು ಸುತ್ತಿಸಿದವರಿಗೆ ದೇವರು ಬುದ್ಧಿ ಕೊಡಲಿ ಎನ್ನುವ ಮೂಲಕ ಕುಮಾರಸ್ವಾಮಿಯವರನ್ನು ಕುಟುಕಿದ್ದಾರೆ.