ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ಸಹಾಯ ಒದಗಿಸ್ತಾ ಇದೆ. ಮೇ 31ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ 11 ಕಂತಿನ ಹಣವನ್ನು ಬಿಡುಗಡೆ ಮಾಡಿದ್ದರು.
ಪಿಎಂ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ಸುಮಾರು 21,000 ಕೋಟಿ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಪ್ರತಿ ಕಂತಿನಲ್ಲೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2000 ರೂಪಾಯಿಯನ್ನು ಸರ್ಕಾರವೇ ಜಮಾ ಮಾಡುತ್ತದೆ.
ಇದಕ್ಕಾಗಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಪ್ರತಿ ವರ್ಷ 6000 ರೂಪಾಯಿಗಳ ವಾರ್ಷಿಕ ನಗದು ವರ್ಗಾವಣೆಯನ್ನು ರೈತರಿಗೆ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಮೊದಲ ಕಂತು ಏಪ್ರಿಲ್-ಜುಲೈ ನಡುವೆ, ಎರಡನೇ ಕಂತು ಆಗಸ್ಟ್-ನವೆಂಬರ್ ನಡುವೆ ಮತ್ತು ಮೂರನೇ ಕಂತು ಡಿಸೆಂಬರ್-ಮಾರ್ಚ್ ನಡುವೆ ಇರುತ್ತದೆ.
ಆರಂಭದಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದಾಗ 2 ಹೆಕ್ಟೇರ್ ವರೆಗೆ ಸಂಯೋಜಿತ ಭೂಹಿಡುವಳಿ ಹೊಂದಿರುವವರು, ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಅದರ ಲಾಭ ವಿತರಿಸಲು ನಿರ್ಧರಿಸಲಾಗಿತ್ತು. ನಂತರ ಜೂನ್ 2019 ರಲ್ಲಿ ಈ ಯೋಜನೆಯನ್ನು ಪರಿಷ್ಕರಿಸಲಾಯಿತು. ಜಮೀನುಗಳ ಗಾತ್ರವನ್ನು ಲೆಕ್ಕಿಸದೆ ಎಲ್ಲಾ ರೈತ ಕುಟುಂಬಗಳಿಗೆ ಹಣವನ್ನು ನೀಡಲು ನಿರ್ಧರಿಸಲಾಯಿತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಪ್ರತಿ ವರ್ಷ 6,000 ರೂಪಾಯಿಗಳನ್ನು ದೇಶದ ಎಲ್ಲಾ 14.5 ಕೋಟಿ ರೈತರಿಗೆ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ರೈತರ ಭೂಹಿಡುವಳಿಯ ಗಾತ್ರವನ್ನು ಲೆಕ್ಕಿಸದೆ ಹಣ ವಿತರಿಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ರೈತ ಕುಟುಂಬಗಳಿಗಿಲ್ಲ ಪಿಎಂ ಕಿಸಾನ್ ಯೋಜನೆ ಲಾಭ
ಆದರೆ ಸಾಂಸ್ಥಿಕ ಭೂಮಿ ಹೊಂದಿರುವವರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು, ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ಹಾಗೂ ಸಾರ್ವಜನಿಕ ವಲಯದ ಅನ್ಟೇಕಿಂಗ್ಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ ದೊರೆಯುವುದಿಲ್ಲ.
ವೈದ್ಯರು, ಇಂಜಿನಿಯರ್ಗಳು ಮತ್ತು ವಕೀಲರಂತಹ ವೃತ್ತಿಪರರು ಹಾಗೂ 10,000 ರೂಪಾಯಿಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ನೌಕರರು, ಕಳೆದ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು ಸಹ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಲ್ಲ.