ತೂಕ ಕಡಿಮೆ ಮಾಡಲು ಮಾರುಕಟ್ಟೆಯಿಂದ ತರಹೇವಾರಿ ತಿನಿಸುಗಳನ್ನು ಪ್ರತ್ಯೇಕವಾಗಿ ತರಬೇಕಾಗಿಲ್ಲ. ಮನೆಯಲ್ಲಿಯೇ ಇರುವ ಹಣ್ಣು, ತರಕಾರಿಗಳನ್ನು ಸೂಕ್ತ ರೀತಿಯಲ್ಲಿ ಸೇವನೆ ಮಾಡಿ ತೂಕವನ್ನು ಇಳಿಸಬಹುದು. ನಾವು ನಿತ್ಯದ ಅಡುಗೆಗೆ ಬಳಸುವ ಕ್ಯಾಪ್ಸಿಕಂ ಕೂಡ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು ನೀವು ಬಯಸಿದರೆ, ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಕ್ಯಾಪ್ಸಿಕಮ್ ಅನ್ನು ಸೇರಿಸಲು ಪ್ರಾರಂಭಿಸಿ. ಆಹಾರ ಕ್ರಮದಲ್ಲಿ ಕ್ಯಾಪ್ಸಿಕಂ ಅನ್ನು ಸೇರಿಸುವ ಮೊದಲು, ಅದನ್ನು ಯಾವ ರೀತಿ ತಿನ್ನಬೇಕು ಎಂಬುದನ್ನು ತಿಳಿದಿರಬೇಕು.
ಹುರಿದ ಕ್ಯಾಪ್ಸಿಕಂ: ಹುರಿದ ಕ್ಯಾಪ್ಸಿಕಂ ತಿನ್ನುವುದರಿಂದ ತೂಕವನ್ನು ವೇಗವಾಗಿ ಕಡಿಮೆ ಮಾಡಬಹುದು. ಕ್ಯಾಪ್ಸಿಕಂನಲ್ಲಿ ಕ್ಯಾಪ್ಸೈಸಿನಾಯ್ಡ್‌ಗಳು ಕಂಡುಬರುತ್ತವೆ. ಇದು ಚಯಾಪಚಯವನ್ನು ಸುಧಾರಿಸಲು ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾಪ್ಸಿಕಂ ಅನ್ನು ದೊಡ್ಡದಾಗಿ ಕತ್ತರಿಸಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿಕೊಳ್ಳಿ. ಉಪ್ಪು ಮತ್ತಿತರ ಮಸಾಲೆಗಳನ್ನ ಕೂಡ ಅಲ್ಪ ಪ್ರಮಾಣದಲ್ಲಿ ಸೇರಿಸಬಹುದು.
ಕ್ಯಾಪ್ಸಿಕಂ ಸೂಪ್: ಕ್ಯಾಪ್ಸಿಕಂ ಅನ್ನು ಸೂಪ್ ರೂಪದಲ್ಲಿಯೂ ಸೇವಿಸಬಹುದು. ಕ್ಯಾಪ್ಸಿಕಂ ಸೂಪ್ ತಯಾರಿಸಲು ಇತರ ತರಕಾರಿಗಳೊಂದಿಗೆ ಕ್ಯಾಪ್ಸಿಕಮ್ ಅನ್ನು ಚೆನ್ನಾಗಿ ಬೇಯಿಸಬೇಕು. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಬೆಳ್ಳುಳ್ಳಿ ಹಾಕಿ. ರುಚಿಗೆ ಬ್ಲಾಕ್ ಸಾಲ್ಟ್ ಸೇರಿಸಿ. ಬಿಸಿ ಬಿಸಿಯಾಗಿ ಸೂಪ್ ಅನ್ನು ಸವಿಯಿರಿ.
ಕ್ಯಾಪ್ಸಿಕಂ ಪ್ರೋಟೀನ್ ಶೇಕ್: ಕ್ಯಾಪ್ಸಿಕಂನ ಪ್ರೋಟೀನ್ ಶೇಕ್ ಕೂಡ ಮಾಡಬಹುದು. ಬ್ರೊಕೊಲಿ, ಕ್ಯಾಪ್ಸಿಕಂ ಮತ್ತು ಪ್ರೋಟೀನ್ ಪೌಡರ್ ತೆಗೆದುಕೊಳ್ಳಿ. ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಶೇಕ್ ಮಾಡಿ.ಈ ಮೂರು ವಿಧಾನಗಳಲ್ಲಿ ಕ್ಯಾಪ್ಸಿಕಂ ಅನ್ನು ಸೇವಿಸಿದರೆ ಸುಲಭವಾಗಿ ತೂಕ ಇಳಿಸಲು ಸಾಧ್ಯ. ಪ್ರತಿನಿತ್ಯದ ಆಹಾರದಲ್ಲಿ ಈ ಬದಲಾವಣೆಗಳ ಜೊತೆಗೆ ವ್ಯಾಯಾಮವನ್ನೂ ಮಾಡಿದರೆ ತೂಕ ಇಳಿಸುವುದು ಇನ್ನೂ ಸುಲಭವಾಗುತ್ತದೆ.