ಆಗಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಎಲ್ಲದಕ್ಕೂ ವೈದ್ಯರ ಬಳಿ ತೆರಳುವುದು ಕೂಡ ಅಸಾಧ್ಯ. ಹಾಗಾಗಿ ಕೆಲವೊಂದು ಮನೆಮದ್ದುಗಳನ್ನು ತಿಳಿದುಕೊಂಡಿದ್ದರೆ ಅಂತಹ ಆರೋಗ್ಯ ತೊಂದರೆಗಳಿಗೆ ಸುಲಭವಾಗಿ ಪರಿಹಾರ ಸಿಗುತ್ತದೆ. ದೇಶೀಯ ಮಸಾಲೆಗಳು ಕೂಡ ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿವೆ. ಅವುಗಳಲ್ಲೊಂದು ಇಂಗು. ಇದು ತಿನಿಸುಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ ಹಲವಾರು ರೋಗಗಳಿಂದ ಮುಕ್ತಿ ನೀಡಬಲ್ಲದು.
ಇಂಗಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇಂಗನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿದರೆ ಅದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಂಗಿನ ನೀರನ್ನು ತಯಾರಿಸುವುದು ಕೂಡ ಸುಲಭ. ಒಂದು ಲೋಟ ನೀರನ್ನು ಲಘುವಾಗಿ ಬಿಸಿ ಮಾಡಿ ಅದರಲ್ಲಿ ಒಂದು ಚಿಟಿಕೆ ಇಂಗನ್ನು ಬೆರೆಸಿ. ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯಿರಿ.
ತಲೆನೋವು: ಸಾಮಾನ್ಯವಾಗಿ ತಲೆನೋವಿನ ಸಮಸ್ಯೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂಥವರಿಗೆ ಇಂಗಿನ ನೀರು ಬಹಳ ಉಪಯುಕ್ತ. ಇಂಗು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಜೊತೆಗೆ ತಲೆಯ ರಕ್ತನಾಳಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇಂಗು ಬೆರೆಸಿದ ನೀರು ಕುಡಿಯುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
ಶೀತ ಮತ್ತು ಕೆಮ್ಮು : ಬಿಸಿನೀರು ಮತ್ತು ಇಂಗು ಸೇವನೆಯಿಂದ ಉಸಿರಾಟದ ತೊಂದರೆಗಳನ್ನು ನಿವಾರಿಸಬಹುದು. ಶೀತ, ಕೆಮ್ಮಿನ ಸಮಸ್ಯೆ ಇದ್ದರೆ ಅದಕ್ಕೂ ಇಂಗು ರಾಮಬಾಣ. ಬದಲಾಗುತ್ತಿರುವ ಋತುವಿನಲ್ಲಿ ಇದನ್ನು ನಿಯಮಿತವಾಗಿ ಕುಡಿಯಿರಿ.
ತೂಕ ಇಳಿಕೆ : ಇಂಗು ಬೆರೆಸಿದ ನೀರನ್ನು ಸೇವನೆ ಮಾಡುವುದರಿಂದ ಹೆಚ್ಚುತ್ತಿರುವ ತೂಕವನ್ನು ಸಹ ಕಡಿಮೆ ಮಾಡಬಹುದು. ಏಕೆಂದರೆ ಇಂಗು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಇಂಗಿನ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.