ಸೋಮವಾರವನ್ನ ಶಿವನ ವಾರ ಅಂತಾನೇ ಕರೆಯುತ್ತಾರೆ.
ಸೋಮವಾರದಂದು ಭಕ್ತಿ ನಿಷ್ಟೆಯಿಂದ ಶಿವನನ್ನ ಆರಾಧಿಸಿದ್ರೆ ನಮ್ಮ ಸಂಕಷ್ಟಗಳೆಲ್ಲ ದೂರವಾಗುತ್ತೆ ಅನ್ನೋ ನಂಬಿಕೆ ನಮ್ಮಲ್ಲಿದೆ.
ಹೀಗಾಗಿ ಸೋಮವಾರ ಶಿವನ ದೇವಾಲಯಗಳಲ್ಲಿ ಜನ ಜಂಗುಳಿಯೇ ನೆರೆದಿರುತ್ತೆ.
ಶಿವನನ್ನ ಸೃಷ್ಟಿಕರ್ತ ಅಂತಾನೂ ಕರೀತಾರೆ. ಹಿಂದೂ ಧರ್ಮದಲ್ಲಿ ಬರುವ ತ್ರಿಮೂರ್ತಿಗಳಲ್ಲಿ ಮಹೇಶ್ವರ ಕೂಡ ಒಬ್ಬ. ಓಂ ನಮಃ ಶಿವಾಯ ಮಂತ್ರವನ್ನ ಜಪಿಸೋದ್ರಿಂದ ನಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ದೂರವಾಗುತ್ತೆ. ಆದರೆ ಈ ಮಂತ್ರವನ್ನ ಪಠಿಸುವಾಗ ಹಲವು ನಿಯಮಗಳನ್ನ ಪಾಲಿಸಬೇಕು.
ಈ ಚಮತ್ಕಾರಿ ಮಂತ್ರವನ್ನ ಪಠಿಸಲು ನಮ್ಮ ಧರ್ಮ ಯಾವುದೇ ಸಮಯವನ್ನ ನಿಗದಿ ಮಾಡಿಲ್ಲ. ಹೀಗಾಗಿ ಈ ಜಪವನ್ನ ಯಾವ ಹೊತ್ತಿನಲ್ಲಾದರೂ ನಿಮ್ಮ ಅನುಕೂಲಕ್ಕೆ ಮಾಡಬಹುದು.
ಪ್ರಶಾಂತವಾಗಿರೋ ನದಿಯ ದಡದಲ್ಲಿ ಪುಟ್ಟ ಶಿವಲಿಂಗವನ್ನ ಸ್ಥಾಪಿಸಿ ಈ ಮಂತ್ರ ಜಪಿಸಿದ್ರೆ ತುಂಬಾನೇ ಒಳ್ಳೆಯದು. ಇದು ನಿಮ್ಮಿಂದ ಸಾಧ್ಯವಾಗದೇ ಇದ್ದಲ್ಲಿ ಮನೆಯಲ್ಲೇ ಶಾಂತಿ ನೆಲೆಸಿರೋ ಸ್ಥಳದಲ್ಲಿ ಕೂತು ನೀವು ಜಪ ಮಾಡಬಹುದು. ಈ ಮಂತ್ರ ಜಪಿಸುವ ವೇಳೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡೋದು ಕಡ್ಡಾಯ.
ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು 108 ಬಾರಿ ಈ ಮಂತ್ರವನ್ನ ಪಠಿಸಬೇಕು. ನಿಯಮಾನುಸಾರ ಈ ಮಂತ್ರವನ್ನ ಪಠಿಸೋದ್ರಿಂದ ಧನ ಲಾಭ , ಸಂತಾನ ಭಾಗ್ಯ ಹಾಗೂ ಶತ್ರುಗಳನ್ನ ಸಂಹಾರ ಮಾಡೋಕೆ ಸಾಧ್ಯವಾಗುತ್ತೆ . ಅಲ್ಲದೇ ಈ ಮಂತ್ರ ಪಠಣೆಯಿಂದ ನಿಮ್ಮ ಜೀವನದ ಎಲ್ಲ ಸಂಕಷ್ಟಗಳೂ ಪರಿಹಾರವಾಗುತ್ತೆ.