ಪ್ರತಿದಿನ ಸರಿಯಾಗಿ ಬೆಳಗ್ಗೆ 8:30ಕ್ಕೆ ತೆಲಂಗಾಣದ ನಲ್ಗೊಂಡ ಪಟ್ಟಣದ 12 ಪ್ರಮುಖ ಜಂಕ್ಷನ್ಗಳಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತೆ. ಈ ಸಮಯದಲ್ಲಿ ಅಲ್ಲಿ 52 ಸೆಕೆಂಡುಗಳ ಕಾಲ ಜನರು ತಮ್ಮೆಲ್ಲ ಕೆಲಸವನ್ನು ಅಲ್ಲಿಯೇ ಬಿಟ್ಟು ಎದ್ದು ನಿಲ್ಲುವ ಮೂಲಕ ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತಾರೆ.
ಪ್ರತಿ ದಿನ ಬೆಳಗ್ಗೆ ಜಾತಿ ಧರ್ಮ ಮತಭೇದದ ಯಾವುದೇ ಹಂಗಿಲ್ಲದೇ ಎಲ್ಲರೂ ಒಟ್ಟಾಗಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ನಾವೆಲ್ಲ ಒಂದೇ ಎಂದು ಸಂದೇಶ ಸಾರುವ ಸಲುವಾಗಿ ಇಲ್ಲಿನ ಜನತೆ ಈ ರೂಢಿಯನ್ನು ಮಾಡಿಕೊಂಡಿದ್ದಾರೆ.
ಅಂದಹಾಗೆ ಈ ವರ್ಷದ ಜನವರಿ 23ರಿಂದ ಈ ಪಟ್ಟಣದಲ್ಲಿ ಈ ಹೊಸ ಕ್ರಮವನ್ನು ಜಾರಿಗೆ ತರಲಾಗಿದೆ. ಜನಗಣಮನ ಉತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಾತಿ ವಿಜಯ್ ಕುಮಾರ್ ಹಾಗೂ ಅವರ ಸ್ನೇಹಿತರು ಒಂದಾಗಿ ಈ ಒಂದು ಹೊಸ ಉಪಕ್ರಮವನ್ನು ತಮ್ಮ ಪಟ್ಟಣದಲ್ಲಿ ಆರಂಭಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಎಲ್ಲರೂ ಒಂದಾಗಿ ರಾಷ್ಟ್ರಗೀತೆಯನ್ನು ಹಾಡುವುದರಿಂದ ಎಲ್ಲರಲ್ಲೂ ದೇಶ ಭಕ್ತಿ ಹೆಚ್ಚುತ್ತದೆ ಎಂಬುದು ಇವರ ನಂಬಿಕೆಯಾಗಿದೆ.
ನಲ್ಗೊಂಡ ಪಟ್ಟಣವನ್ನು ಮಾದರಿಯಾಗಿಟ್ಟುಕೊಂಡ ಸಮೀಪದ ಇನ್ನೂ ಅನೇಕ ಪುಟ್ಟ ಗ್ರಾಮಗಳು ಪ್ರತಿ ದಿನ ಬೆಳಗ್ಗೆ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಕಾರ್ಯವನ್ನು ಆರಂಭಿಸಿವೆ.