ಭಾರತವು ತನ್ನ ವೈವಿಧ್ಯಮಯ ಆಹಾರಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ನೂರು ಕಿಲೋಮೀಟರ್‌ಗಳಿಗೆ ಆಹಾರದ ರುಚಿ ಮತ್ತು ಅಡುಗೆ ಮಾಡುವ ವಿಧಾನ ಬದಲಾಗುತ್ತದೆ. ಚಪಾತಿಯನ್ನು ಬಹುತೇಕ ಎಲ್ಲಾ ಕಡೆ ಸೇವನೆ ಮಾಡಲಾಗುತ್ತದೆ. ಭಾರತದಲ್ಲಿ, ವಿಶ್ವದ ಅತಿದೊಡ್ಡ ರೊಟ್ಟಿಯನ್ನು ತಯಾರಿಸುವ ಸ್ಥಳವಿದೆ. ಈ ರೊಟ್ಟಿಯ ಗಾತ್ರ ಎಷ್ಟಿದೆ ಅಂದರೆ ಒಂದೇ ರೊಟ್ಟಿಯಲ್ಲಿ ಇಡೀ ಗ್ರಾಮಸ್ಥರ ಹೊಟ್ಟೆ ತುಂಬಿಸಬಹುದು.
ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಚಪಾತಿ ತಯಾರಾಗಿದೆ. ಈ ರೊಟ್ಟಿಯನ್ನು ಪ್ರತಿನಿತ್ಯ ಮಾಡುವುದಿಲ್ಲ. ಬದಲಿಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ದಗ್ದು ಸೇಠ್ ಗಣಪತಿ ಸಾರ್ವಜನಿಕ ಉತ್ಸವ ಅಥವಾ ಜಲರಾಮ್ ಬಾಪಾ ಅವರ ಜನ್ಮದಿನದಂದು ಭಾರೀ ಗಾತ್ರದ ಚಪಾತಿ ಸಿದ್ಧಪಡಿಸುವುದು ವಾಡಿಕೆ. ಜಲರಾಮ್ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರು ಈ ರೊಟ್ಟಿಯನ್ನು ಮಾಡುತ್ತಾರೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದನ್ನು ಬಡಿಸಲಾಗುತ್ತದೆ. ವಿಶೇಷ ದಿನದಂದು ಈ ರೊಟ್ಟಿಯನ್ನು ತಿನ್ನಲು ಜನರು ದೂರದ ಸ್ಥಳಗಳಿಂದ ಜಾಮ್‌ನಗರಕ್ಕೆ ಬರುತ್ತಾರೆ. ಪ್ರಪಂಚದ ಅತಿ ದೊಡ್ಡ ರೊಟ್ಟಿಯನ್ನು ತಯಾರಿಸಲು ಒಂದಲ್ಲ ಎರಡಲ್ಲ ಅನೇಕ ಮಹಿಳೆಯರು ಒಟ್ಟುಗೂಡುತ್ತಾರೆ. ಹಲವು ಗಂಟೆಗಳ ಕಠಿಣ ಪರಿಶ್ರಮದ ನಂತರ ಈ ರೊಟ್ಟಿ ಸಿದ್ಧವಾಗುತ್ತದೆ.
ಈ ರೊಟ್ಟಿ ಮಾಡಲು ಸಾಕಷ್ಟು ಗೋಧಿ ಹಿಟ್ಟನ್ನು ಬಳಸಲಾಗುತ್ತದೆ. ಈ ಚಪಾತಿಯ ತೂಕ 145 ಕೆಜಿ. ಇದನ್ನು ಬೇಯಿಸಲು ದೇವಾಲಯದ ಬಳಿ ದೊಡ್ಡದಾದ ಕಾವಲಿಯೇ ಇದೆ. ರೊಟ್ಟಿಯನ್ನು ಬೇಯಿಸಲು ಅನೇಕ ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಮತ್ತು ರೊಟ್ಟಿ ಸುಡದಂತೆ ಜ್ವಾಲೆಯನ್ನು ಕಡಿಮೆ ಇರಿಸಲಾಗುತ್ತದೆ.