
ಭಾರತೀಯ ದೂರದರ್ಶನದ ಧಾರಾವಹಿಗಳು ನಮಗೆ ಅತ್ಯಂತ ಭಯಭೀತಗೊಳಿಸುವ ಕೆಲವು ದೃಶ್ಯಗಳನ್ನು ನೀಡಿವೆ. ಅದು ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ.
ವರನೊಬ್ಬ ತನ್ನ ಫಸ್ಟ್ ನೈಟ್ ನಲ್ಲಿ ಹಾಲಿನೊಂದಿಗೆ ಜಿರಳೆ ಕುಡಿದ ವಿಡಿಯೋ ಬಹುಶಃ ನಿಮಗೆ ನೆನಪಿರಬಹುದು. ಇದೀಗ ಈ ವಿಡಿಯೋ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ. ಸ್ವರಣ್ ಘರ್ ಧಾರಾವಾಹಿಯ ಕ್ಲಿಪ್ ವೈರಲ್ ಆಗಿದ್ದು, ನೆಟ್ಟಿಗರು ಇನ್ನು ಈ ಕಣ್ಣಲ್ಲಿ ಏನೇನ್ ನೋಡಬೇಕೋ ಅಂತಾ ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ.
ಸ್ವರಣ್ (ಸಂಗೀತಾ ಘೋಷ್ ನಿರ್ವಹಿಸಿದ) ಮತ್ತು ಅಜಿತ್ ಲಂಬಾ (ಅಜಯ್ ಚೌಧರಿ ನಿರ್ವಹಿಸಿದ) ಕಾರ್ಯಕ್ರಮದ ಪ್ರಮುಖ ಪಾತ್ರಗಳನ್ನು ವಿಡಿಯೋ ಒಳಗೊಂಡಿದೆ. ಸ್ವರನ್ ತನ್ನ ದುಪ್ಪಟ್ಟಾವನ್ನು ಕತ್ತಿನಿಂದ ಹಿಂದೆ ಹಾಕಿದ್ದಾಳೆ. ಈ ವೇಳೆ ದುಪ್ಪಟ್ಟಾ ಟೇಬಲ್ ಫ್ಯಾನ್ ಗೆ ಆಕಸ್ಮಿಕವಾಗಿ ಸಿಲುಕಿಕೊಂಡಿದೆ. ದುಪ್ಪಟ್ಟಾ ತಿರುಗುತ್ತಿರುವ ಫ್ಯಾನ್ ನ ಒಳಗೆ ಸೇರಿಕೊಳ್ಳುತ್ತಿದ್ದಂತೆ, ಕುಣಿಕೆ ಬಿಗಿಯಾಗಿ ಆಕೆಗೆ ಉಸಿರುಗಟ್ಟಲಾರಂಭಿಸಿದೆ. ಅವಳ ಜೀವ ಅಪಾಯದಲ್ಲಿದ್ದರೆ, ನಟ ಹಾಗೂ ಅಲ್ಲಿದ್ದವರು ಏನು ಮಾಡಬೇಕು ಎಂದು ತೋಚದೆ ಗಾಬರಿ ವ್ಯಕ್ತಪಡಿಸಿದ್ದಾರೆ. ಫ್ಯಾನ್ ಅನ್ನು ನಿಲ್ಲಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗುವುದಿಲ್ಲ. ನಂತರ ನಟ ಅಜಿತ್ ದುಪ್ಪಟ್ಟಾವನ್ನು ಹಲ್ಲಿನಿಂದ ಕಚ್ಚಿ ಹರಿಯುತ್ತಾನೆ.
ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಇದರ ಹಿಂದಿನ ಲಾಜಿಕ್ ನೆಟ್ಟಿಗರನ್ನು ತಲೆಗೆಡಿಸಿದೆ. ಇದು ಭೌತಶಾಸ್ತ್ರವನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು, ಇಂಥದ್ದೇ ತಮಾಷೆಯ ವಿಡಿಯೋಗಳನ್ನು ಹಂಚಿಕೊಂಡು ನಕ್ಕಿದ್ದಾರೆ.