ಬಾಂಗ್ಲಾದೇಶ ಸರ್ಕಾರ ಅಲ್ಲಿನ ನಾಗರೀಕರಿಗೆ ಶಾಕ್ ಕೊಟ್ಟಿದೆ. ತೈಲ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸಿದೆ. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ, 1971ರ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಷ್ಟೊಂದು ಹೆಚ್ಚಳವಾಗಿರೋದು ಇದೇ ಮೊದಲು. ತೈಲ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ವಾಹನ ಸವಾರರ ಜೇಬಿಗೆ ಅಲ್ಲಿನ ಸರ್ಕಾರ ಕತ್ತರಿ ಹಾಕಿದೆ.
ಸರ್ಕಾರ ಪರಿಷ್ಕೃತ ಬೆಲೆಯನ್ನು ಘೋಟಣೆ ಮಾಡುತ್ತಿದ್ದಂತೆ ವಾಹನ ಸವಾರರು ಪೆಟ್ರೋಲ್ ಬಂಕ್‌ನಲ್ಲಿ ಜಮಾಯಿಸಿದ್ರು. ಹೊಸ ದರ ಜಾರಿಯಾಗುವ ಮುನ್ನವೇ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಬಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ಕಾಯುತ್ತಿದ್ರು.
ಈ ಮಧ್ಯೆ ಢಾಕಾದ ಮೊಹಮ್ಮದ್‌ಪುರ, ಅಗರ್‌ಗಾಂವ್, ಮಾಲಿಬಾಗ್ ಮತ್ತು ಇತರ ಪ್ರದೇಶಗಳಲ್ಲಿನ ಹಲವಾರು ಪೆಟ್ರೋಲ್ ಬಂಕ್‌ಗಳು ಹೊಸ ಬೆಲೆ ಘೋಷಣೆಯಾಗುತ್ತಿದ್ದಂತೆ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಈ ಪ್ರದೇಶಗಳಲ್ಲಿ ಬಂಕ್‌ಗಳನ್ನೇ ಬಂದ್ ಮಾಡಲಾಗಿತ್ತು. ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬಂದ ಬಳಿಕ ಬಂಕ್‌ಗಳನ್ನು ತೆರೆಯಲಾಯ್ತು.
ಶನಿವಾರದಿಂದ್ಲೇ ಜಾರಿಯಾಗುವಂತೆ ಇಂಧನ ಬೆಲೆಯನ್ನು ಶೇ.51.7ರಷ್ಟು ಹೆಚ್ಚಳ ಮಾಡಲಾಗಿದೆ. ಬಾಂಗ್ಲಾದೇಶದಲ್ಲಿ ಒಂದು ಲೀಟರ್ ಆಕ್ಟೇನ್ ಬೆಲೆ ಈಗ 135 ಟಾಕಾ ಅಂದ್ರೆ ಸುಮಾರು 1.43 ಅಮೆರಿಕನ್ ಡಾಲರ್. ಬೆಲೆ ಏರಿಕೆಗೂ ಮೊದಲು 89 ಟಾಕಾ ಅಂದ್ರೆ 0.94 ಡಾಲರ್ ಇತ್ತು. ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್, ಫೆಬ್ರವರಿಯಿಂದ ಜುಲೈವರೆಗೆ 8,014.51 ಟಾಕಾಗಳಷ್ಟು ನಷ್ಟ ಅನುಭವಿಸಿದೆಯಂತೆ.
ಇದೇ ಕಾರಣಕ್ಕೆ ದಿಢೀರನೆ ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು COVID ಸಾಂಕ್ರಾಮಿಕದಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಗಳಿಗೆ ರಷ್ಯಾ ಅತಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಅನಿಲವನ್ನು ರಫ್ತು ಮಾಡುತ್ತಿತ್ತು.