ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಅಂತ್ಯವಾಗಿಲ್ಲ. ಈ ಸಮರದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿರೋದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ಪುಟಿನ್ ಅವರ ಐಷಾರಾಮಿ ಜೀವನಶೈಲಿ ಈಗ ವೈರಲ್ ಆಗ್ತಿದೆ. ವ್ಲಾಡಿಮಿರ್ ಪುಟಿನ್ ಬಳಿಯಿರೋ ದುಬಾರಿ ವಸ್ತುಗಳ ಲಿಸ್ಟ್ ಕೇಳಿದ್ರೆ ಎಂಥವರೂ ದಂಗಾಗಿ ಹೋಗ್ತಾರೆ.
ಒಂದೆಡೆ ರಷ್ಯಾ-ಉಕ್ರೇನ್ ಯುದ್ಧದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇನ್ನೊಂದೆಡೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪುಟಿನ್ ತಮ್ಮ ಐಷಾರಾಮಿ ಬದುಕಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಪುಟಿನ್‌ರ ಈ ನಡೆ ಟೀಕೆಗೂ ಗುರಿಯಾಗಿದೆ. ಕಪ್ಪು ಸಮುದ್ರದ ಸುಂದರ ನೋಟವಿರೋ 1,90,000 ಚದರ ಅಡಿ ವಿಸ್ತಾರದ ಸುಂದರ ಮಹಲಿನಲ್ಲಿ ವಾಸವಾಗಿದ್ದಾರೆ ಪುಟಿನ್. ಅವರಿಗೆ ಸೇರಿದ ಇನ್ನೂ 19 ಮನೆಗಳಿವೆ. ಪುಟಿನ್ ಬಳಿ 700 ಕಾರುಗಳು, 58 ವಿಮಾನಗಳಿವೆ. ದಿ ಫ್ಲೈಯಿಂಗ್ ಕ್ರೆಮ್ಲಿನ್ ಎಂಬ ವಿಶೇಷ ಹೆಲಿಕಾಪ್ಟರ್‌ಗೂ ಒಡೆಯ ಪುಟಿನ್.
ಪುಟಿನ್ ಅವರ 22- ಬೋಗಿಗಳ ದಿ ಘೋಸ್ಟ್ ಟ್ರೈನ್ ಕೂಡ ಈಗ ಸಾಕಷ್ಟು ಸುದ್ದಿ ಮಾಡ್ತಾ ಇದೆ. ಈ ರೈಲು ಎಷ್ಟು ಅಲಂಕಾರಿಕ ಮತ್ತು ಐಷಾರಾಮಿಯಾಗಿದೆ ಅನ್ನೋದನ್ನು ವರ್ಣಿಸಲಸಾಧ್ಯ. ಪುಟಿನ್ ರಷ್ಯಾದಲ್ಲಿ ಪ್ರಯಾಣಿಸಲು ಈ ರೈಲನ್ನು ಬಳಸುತ್ತಾರೆ. ಈ ರೈಲಿನ ವಿಶೇಷತೆಗಳ ಬಗ್ಗೆ ತಿಳಿದರೆ ಎಲ್ಲರೂ ಅಚ್ಚರಿಪಡ್ತಾರೆ. ಈ ರೈಲು ಸಂಪೂರ್ಣ ಸುಸಜ್ಜಿತ ಜಿಮ್ ಅನ್ನು ಹೊಂದಿದೆ. ಜೊತೆಗೆ ಚರ್ಮದ ಆರೈಕೆ ಮತ್ತು ಮಸಾಜ್ ಪಾರ್ಲರ್ ಇದೆ. ವಯಸ್ಸಾಗದಂತೆ ತಡೆಯುವ ಯಂತ್ರಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಐಷಾರಾಮಿ ಟರ್ಕಿಶ್ ಬಾತ್ ಸ್ಟೀಮ್ ರೂಮ್ ಇದೆ.
ಸುವ್ಯವಸ್ಥಿತ ಮಲಗುವ ಕೋಣೆಗಳು, ಅಲಂಕೃತ ಊಟದ ಟೇಬಲ್, ಥಿಯೇಟರ್ ಹೀಗೆ ಎಲ್ಲಾ ಸೌಲಭ್ಯಗಳೂ ಘೋಸ್ಟ್ ರೈಲಿನಲ್ಲಿರೋದು ವಿಶೇಷ. ಈ ರೈಲಿಗೆ ಬುಲೆಟ್ ಪ್ರೂಫ್ ಬಾಗಿಲುಗಳು ಮತ್ತು ಕಿಟಕಿಗಳನ್ನು ಅಳವಡಿಸಲಾಗಿದೆ. ಜೀವರಕ್ಷಕ ವೈದ್ಯಕೀಯ ಪರಿಕರಗಳಿವೆ. ಈ ರೈಲಿನ ನಿರ್ಮಾಣ ವೆಚ್ಚ 74 ಮಿಲಿಯನ್ ಡಾಲರ್ ಅಂತಾ ಹೇಳಲಾಗ್ತಿದೆ. ರೈಲಿನ ನಿರ್ವಹಣೆ ಮತ್ತು ನವೀಕರಣದ ವೆಚ್ಚವೇ ಪ್ರತಿ ವರ್ಷ ಸುಮಾರು 15.8 ಮಿಲಿಯನ್ ಡಾಲರ್‌ನಷ್ಟಾಗುತ್ತದೆ.