
ಪ್ರಪಂಚದಾದ್ಯಂತ ಜನರು ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ಮನೆ, ಪಾರ್ಕ್, ಮಾರುಕಟ್ಟೆ ಹೀಗೆ ಎಲ್ಲಾ ಕಡೆಗಳಲ್ಲೂ ಸೊಳ್ಳೆಗಳ ಕಾಟ ಇದ್ದಿದ್ದೇ. ಅವುಗಳಿಂದ ಪಾರಾಗಲು ಸೊಳ್ಳೆ ನಿವಾರಕ ಸ್ಪ್ರೇ, ಸೊಳ್ಳೆ ಪರದೆಯಂತಹ ಹಲವು ವಿಧಾನಗಳನ್ನು ಜನರು ಆಶ್ರಯಿಸುತ್ತಾರೆ.ಆದರೆ ಇಲ್ಲೊಂದು ದೇಶದಲ್ಲಿ ಸೊಳ್ಳೆಗಳೇ ಇಲ್ಲ. ಸೊಳ್ಳೆಗಳು ಮಾತ್ರವಲ್ಲ, ಯಾವುದೇ ರೀತಿಯ ಕೀಟಗಳು, ಹಾವುಗಳೂ ಕಂಡುಬರುವುದಿಲ್ಲ.
ಈ ದೇಶದ ಜನರಿಗಂತೂ ಸೊಳ್ಳೆಗಳ ಬಗ್ಗೆ ಗೊತ್ತೇ ಇಲ್ಲ. ಈ ದೇಶದ ಹೆಸರು ಐಸ್ಲ್ಯಾಂಡ್, ಇದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿದೆ. ವರ್ಲ್ಡ್ ಅಟ್ಲಾಸ್ ಪ್ರಕಾರ, ಈ ವಿರಳ ಜನಸಂಖ್ಯೆಯ ದೇಶವು ಸುಮಾರು 1,300 ಜಾತಿಗಳಿಗೆ ನೆಲೆಯಾಗಿದೆ. ಆದರೆ ಅವುಗಳಲ್ಲಿ ಒಂದೂ ಸೊಳ್ಳೆಯಲ್ಲ. ಅದರ ನೆರೆಯ ರಾಷ್ಟ್ರಗಳಾದ ಗ್ರೀನ್‌ಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಡೆನ್ಮಾರ್ಕ್‌ಗಳಲ್ಲಿ ಸೊಳ್ಳೆಗಳು ಹೇರಳವಾಗಿದ್ದರೂ, ಐಸ್‌ಲ್ಯಾಂಡ್‌ನಲ್ಲಿ ಸೊಳ್ಳೆಗಳ ಅನುಪಸ್ಥಿತಿಯು ಸಂಶೋಧಕರಿಗೆ ಆಸಕ್ತಿದಾಯಕ ವಿಷಯವಾಗಿದೆ.
ಸಾಮಾನ್ಯವಾಗಿ ಸೊಳ್ಳೆಗಳಿಗೆ ಮೊಟ್ಟೆ ಇಡಲು ನಿಂತ ನೀರು ಬೇಕು ಎಂದು ಹೇಳಲಾಗುತ್ತದೆ. ಕೊಳ ಮತ್ತು ಇತರ ಜಲಮೂಲಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಐಸ್‌ಲ್ಯಾಂಡ್‌ನಲ್ಲಿ ದೀರ್ಘಾವಧಿಯ ನಿಶ್ಚಲವಾದ ಜಲಮೂಲಗಳು ಲಭ್ಯವಿಲ್ಲ, ಇದು ಸೊಳ್ಳೆಗಳ ಹರಡುವಿಕೆಯನ್ನು ತಡೆಯುತ್ತದೆ.
ಇತರ ಕಾರಣಗಳೇನು?
ಇನ್ನೊಂದು ಕಾರಣವೆಂದರೆ ಐಸ್‌ಲ್ಯಾಂಡ್‌ನಲ್ಲಿನ ಅತ್ಯಂತ ಕಡಿಮೆ ತಾಪಮಾನ. ಇದು ಕೆಲವೊಮ್ಮೆ -38 °C ಗೆ ಇಳಿಯುತ್ತದೆ. ನೀರು ತ್ವರಿತವಾಗಿ ಹೆಪ್ಪುಗಟ್ಟುತ್ತದೆ, ಇದರಿಂದಾಗಿ ಸೊಳ್ಳೆಗಳು ಬದುಕಲು ಅಸಾಧ್ಯ. ಮತ್ತೊಂದು ಸಿದ್ಧಾಂತದ ಪ್ರಕಾರ ಐಸ್‌ಲ್ಯಾಂಡ್‌ನ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ರಚನೆಯು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತವಲ್ಲ. ಹಾವುಗಳು ಮತ್ತು ಇತರ ತೆವಳುವ ಕೀಟಗಳು ಕೂಡ ಈ ದೇಶದಲ್ಲಿಲ್ಲ. ಸ್ಥಳೀಯ ಹವಾಮಾನವು ಅವುಗಳ ಅಸ್ತಿತ್ವಕ್ಕೆ ಅನುಕೂಲಕರವಾಗಿಲ್ಲ. ಐಸ್‌ಲ್ಯಾಂಡ್‌ನಲ್ಲಿ ಮಿಡ್ಜ್‌ಗಳಿವೆ, ಇದು ಸೊಳ್ಳೆಗಳನ್ನು ಹೋಲುತ್ತದೆ. ಆದರೆ ಸೊಳ್ಳೆಗಳಿಗಿಂತ ಕಡಿಮೆ ಆಕ್ರಮಣಕಾರಿಯಾಗಿದೆ. ಅವು ಕಚ್ಚಿದರೂ ಯಾವುದೇ ಅಪಾಯವಿಲ್ಲ.