
ಮದುವೆಗಳಲ್ಲಿ ಪ್ರಪಂಚದಾದ್ಯಂತ ಶತ ಶತಮಾನಗಳಿಂದಲೂ ಲೆಕ್ಕವಿಲ್ಲದಷ್ಟು ಸಂಪ್ರದಾಯಗಳು ರೂಢಿಯಲ್ಲಿವೆ. ಭಾರತದಲ್ಲಂತೂ ಒಂದೊಂದು ಪ್ರದೇಶದಲ್ಲಿಯೂ ಒಂದೊಂದು ಬಗೆಯ ಸಂಪ್ರದಾಯಗಳಲ್ಲಿ ಮದುವೆಗಳು ನೆರವೇರುತ್ತವೆ. ಕೆಲವು ಕಡೆಗಳಲ್ಲಂತೂ ಚಿತ್ರ ವಿಚಿತ್ರ ಆಚರಣೆಗಳು ನಮ್ಮನ್ನು ದಂಗುಬಡಿಸುತ್ತವೆ. ಫಿಜಿ ದೇಶದಲ್ಲಿ ಕೂಡ ಅಂಥದ್ದೇ ವಿಲಕ್ಷಣ ಸಂಪ್ರದಾಯವೊಂದು ಮದುವೆಗಳಲ್ಲಿ ನಡೆಯುತ್ತದೆ.
ಮದುವೆ ಪ್ರತಿಯೊಬ್ಬರ ಬದುಕಿನ ಮಹತ್ವದ ಘಟ್ಟ. ಇದು ಎಲ್ಲಾ ಸಂಬಂಧಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಫಿಜಿ ದೇಶದಲ್ಲಿ ವರ ಮದುವೆಯಲ್ಲಿ ವಿಚಿತ್ರ ಪದ್ಧತಿಯನ್ನು ಅನುಸರಿಸಬೇಕು. ಆತ ಸ್ಪರ್ಮ್ ವ್ಹೇಲ್ ಹಲ್ಲು ತರುವವರೆಗೂ ವಧುವಿನ ಕುಟುಂಬ ಸದಸ್ಯರು ಅವನನ್ನು ಸ್ವೀಕರಿಸುವುದಿಲ್ಲ. ಸ್ಪರ್ಮ್ ವ್ಹೇಲ್‌ನ ಹಲ್ಲು ಮದುವೆಯನ್ನು ನಿರ್ಧರಿಸುತ್ತದೆ. ಫಿಜಿ ಒಂದು ಸಣ್ಣ ದ್ವೀಪ ರಾಷ್ಟ್ರ.
ಇಲ್ಲಿ ಹಳೆಯ ಸಂಪ್ರದಾಯಗಳು ಇಂದಿಗೂ ಮುಂದುವರೆದಿದೆ. ಅವುಗಳಲ್ಲಿ ಈ ಸ್ಪರ್ಮ್ ವೇಲ್ನ ಹಲ್ಲು ತರುವುದು ಕೂಡ ಒಂದು. ವರ ತಿಮಿಂಗಿಲದ ಹಲ್ಲುಗಳ ಹಾರವನ್ನು ಉಡುಗೊರೆಯಾಗಿ ನೀಡಬೇಕು. ಹುಡುಗ ಮೀನಿನ ಹಲ್ಲಿನ ಹಾರವನ್ನು ತಂದು ಹುಡುಗಿಯರ ಮುಂದೆ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ. ಸ್ಪರ್ಮ್ ವೇಲ್ ಹಲ್ಲುಗಳನ್ನು ಫಿಜಿಯಲ್ಲಿ ತಬುವಾ ಎಂದು ಕರೆಯಲಾಗುತ್ತದೆ. ತಬುವಾ ಎಂದರೆ ಪವಿತ್ರ ಎಂದರ್ಥ.
ಒಬ್ಬ ವ್ಯಕ್ತಿಯು ತಬುವಾವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದಾಗ, ಅವನು ತನ್ನ ಸಮರ್ಪಣೆಯನ್ನು ತೋರಿಸುತ್ತಾನೆ ಎಂದು ನಂಬಲಾಗಿದೆ. ಈ ಸಂಬಂಧ ತನಗೆ ಎಲ್ಲಕ್ಕಿಂತ ಮಿಗಿಲಾದುದು ಎಂಬುದನ್ನು ಈ ಮೂಲಕ ತೋರಿಸುತ್ತಾನೆ. ತಬುವಾ ಉಡುಗೊರೆ ನೀಡಿದ ನಂತರವೇ ಹುಡುಗಿಯ ಕುಟುಂಬ ಸದಸ್ಯರು ಆಕೆಯನ್ನು ಹುಡುಗನ ಕೈಗೆ ಒಪ್ಪಿಸುತ್ತಾರೆ. ಗಮನಿಸಬೇಕಾದ ವಿಷಯವೆಂದರೆ ತಬುವಾವನ್ನು ತರುವುದು ಸುಲಭವಲ್ಲ. ಮಾರುಕಟ್ಟೆಯಲ್ಲಿ ಇದು ತುಂಬಾ ದುಬಾರಿ. 1 ಕೆಜಿ ಹಲ್ಲಿನ ಬೆಲೆ ಸುಮಾರು 80 ಸಾವಿರ ರೂಪಾಯಿ ಇರಬಹುದು. ಅನೇಕರು ಇದನ್ನು ತಮ್ಮ ಗೌರವವೆಂದು ಪರಿಗಣಿಸುತ್ತಾರೆ. ಕೆಲವರು ಸಂಪ್ರದಾಯಕ್ಕೋಸ್ಕರ ಒಂದೇ ಹಲ್ಲಿನ ಹಾರವನ್ನೂ ಹಾಕುತ್ತಾರೆ.