ಡೈಮಂಡ್ ಅಂದ ತಕ್ಷಣ ಆಭರಣ ಪ್ರಿಯರಣ ಕಣ್ಣರಳಿಬಿಡುತ್ತದೆ. ಅಪರೂಪದ ಗುಲಾಬಿ ವಜ್ರವೊಂದು ಆಫ್ರಿಕನ್ ರಾಷ್ಟ್ರವಾದ ಅಂಗೋಲಾದಲ್ಲಿ ಪತ್ತೆಯಾಗಿದೆ. ಅಲ್ಲಿನ ಗಣಿಗಳಲ್ಲಿ ಕೆಲಸ ಮಾಡ್ತಿದ್ದವರು ಅತಿ ದೊಡ್ಡ ಪಿಂಕ್ ಡೈಮಂಡ್ ಅನ್ನು ಪತ್ತೆ ಹಚ್ಚಿದ್ದಾರೆ. ಕಳೆದ 300 ವರ್ಷಗಳಲ್ಲೇ ಇಷ್ಟು ದೊಡ್ಡ ಪಿಂಕ್ ಡೈಮಂಡ್ ಪತ್ತೆಯಾಗಿರಲಿಲ್ಲ.
ಇದೊಂದು ಅಪರೂಪದ ವಜ್ರ, ಶುದ್ಧ ಗುಲಾಬಿ ಬಣ್ಣದಲ್ಲಿದೆ. “ಲುಲೋ ರೋಸ್” ಎಂದು ಕರೆಯಲ್ಪಡುವ ಈ ವಜ್ರ 170 ಕ್ಯಾರೆಟ್ ತೂಕವಿದೆ. ಈವರೆಗೆ ಪತ್ತೆಯಾದ ಗುಲಾಬಿ ವಜ್ರಗಳಲ್ಲೇ ಅತಿ ದೊಡ್ಡದು. ಲುಲೋ ರೋಸ್, ಮೆಕ್ಕಲು ವಜ್ರದ ಗಣಿಯಲ್ಲಿ ವಜ್ರ ಪತ್ತೆಯಾಗಿದೆ ಎಂದು ಗಣಿ ಮಾಲೀಕ ಲುಕಾಪಾ ಡೈಮಂಡ್ ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಲುಲೋ ಗಣಿ ಈಗಾಗಲೇ ಅಂಗೋಲಾದಲ್ಲಿ ಕಂಡುಬಂದ ಎರಡು ದೊಡ್ಡ ವಜ್ರಗಳನ್ನು ಉತ್ಪಾದಿಸಿದೆ.
ಇದರಲ್ಲಿ 404 ಕ್ಯಾರೆಟ್‌ನ ಸ್ಪಷ್ಟ ವಜ್ರವೂ ಸೇರಿದೆ. ಗುಲಾಬಿ ಡೈಮಂಡ್ ಐದನೇ ಅತಿದೊಡ್ಡ ವಜ್ರವಾಗಿದ್ದು, ಆಸ್ಟ್ರೇಲಿಯಾದಲ್ಲಿ ನೆಲೆಗೊಂಡಿರುವ ಲುಕಾಪಾ ಪ್ರಕಾರ, 100 ಕ್ಯಾರೆಟ್ ಅಥವಾ ಅದಕ್ಕಿಂತ ಹೆಚ್ಚಿನ 27 ವಜ್ರಗಳು ಇಲ್ಲಿ ಕಂಡುಬಂದಿವೆ. ಈ ಪಿಂಕ್ ಡೈಮಂಡ್ ಅನ್ನು ಅಂಗೋಲನ್ ಸ್ಟೇಟ್ ಡೈಮಂಡ್ ಮಾರ್ಕೆಟಿಂಗ್ ಕಂಪನಿ, ಅಂತರಾಷ್ಟ್ರೀಯ ಟೆಂಡರ್ ಮೂಲಕ ಮಾರಾಟ ಮಾಡಲಿದೆ. ಅಂಗೋಲಾದ ಗಣಿ ವಿಶ್ವದ ಟಾಪ್ 10 ವಜ್ರ ಉತ್ಪಾದಕರಲ್ಲಿ ಒಂದು ಎನಿಸಿಕೊಂಡಿದೆ.