ಮನೆಯ ಸುತ್ತ ಅಡಗಿಸಿಟ್ಟಿರೋ ನಿಧಿ ಸಿಕ್ಕು ಯಾರೋ ಶ್ರೀಮಂತರಾದ ಕಥೆಯನ್ನು ನೀವು ಕೇಳಿರಬಹುದು. ಆದರೆ ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಮನೆಯ ಹಿತ್ತಲಿನಲ್ಲಿದ್ದ ಬಹುಮುಖ್ಯ ವಸ್ತುವನ್ನು ಕಂಡುಹಿಡಿದ ವ್ಯಕ್ತಿಯೊಬ್ಬನ ಕಥೆ. ಅದು ನಿಧಿಗಿಂತಲೂ ಹೆಚ್ಚು ಮಹತ್ವದ್ದು.
ಪೋರ್ಚುಗೀಸ್ ವ್ಯಕ್ತಿಯೊಬ್ಬ ತನ್ನ ಹಿತ್ತಲಿನಲ್ಲಿ 82 ಅಡಿ ಉದ್ದದ ಡೈನೋಸಾರ್ ಅಸ್ಥಿಪಂಜರವನ್ನು ಪತ್ತೆ ಮಾಡಿದ್ದಾನೆ. ಇದು ಯುರೋಪಿನ ಅತಿದೊಡ್ಡ ಡೈನೋಸಾರ್ ಎಂದು ತಜ್ಞರು ವಿವರಿಸಿದ್ದಾರೆ. ಈ ಅಸ್ಥಿಪಂಜರವು 160 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ.
160 ರಿಂದ 100 ದಶಲಕ್ಷ ವರ್ಷಗಳ ಹಿಂದೆ ಇವು ಭೂಮಿಯ ಮೇಲೆ ಇದ್ದವು ಎಂದು ವಿಜ್ಞಾನಿಗಳು ನಂಬಿದ್ದಾರೆ. ಇವು ನಾಲ್ಕು ಕಾಲಿನ ಸಸ್ಯಹಾರಿ ಡೈನೋಸಾರ್‌ಗಳಾಗಿದ್ದು, ಇವುಗಳ ಕುತ್ತಿಗೆ ಮತ್ತು ಬಾಲವು ಇತರ ಡೈನೋಸಾರ್‌ಗಳಿಗಿಂತ ಉದ್ದವಾಗಿತ್ತು. ಇವು ಪ್ರಪಂಚದಲ್ಲಿ ಕಂಡುಬರುವ ಅತಿದೊಡ್ಡ ಸಸ್ಯಾಹಾರಿಗಳಾಗಿವೆ. ಈ ರೀತಿ ಡೈನೋಸಾರ್ ಗಳ ಪಕ್ಕೆಲುಬುಗಳನ್ನು ಪತ್ತೆ ಹಚ್ಚುವುದು ಒಂದು ವಿಶಿಷ್ಟ ಸಂಗತಿ ಎಂದು ಲಿಸ್ಬನ್ ವಿಶ್ವವಿದ್ಯಾಲಯದ ಸಂಶೋಧಕಿ ಎಲಿಜಬೆತ್ ಮಲಾಫಿಯಾ ಹೇಳಿದ್ದಾರೆ.
ಡೈನೋಸಾರ್ ಪಳೆಯುಳಿಕೆಗಳನ್ನು ಅದೇ ಸ್ಥಿತಿಯಲ್ಲಿ ಸಂರಕ್ಷಿಸಬೇಕು. ವಿಜ್ಞಾನಿಗಳು ಪಳೆಯುಳಿಕೆಗಳನ್ನು ಅಧ್ಯಯನ ಮಾಡುತ್ತಾರೆ. ಪಳೆಯುಳಿಕೆ ವಿಕಾಸದ ಅನುಕ್ರಮವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಯುರೋಪ್ ಕೂಡ ಡೈನೋಸಾರ್‌ಗಳ ಆವಾಸ ಸ್ಥಾನವಾಗಿತ್ತು ಎಂಬುದಕ್ಕೆ ಈ ಅಸ್ಥಿಪಂಜರವೇ ಸಾಕ್ಷಿ. ಪೋರ್ಚುಗಲ್‌ನಲ್ಲಿ ಪತ್ತೆಯಾದ ಈ ಅಸ್ಥಿಪಂಜರ ಬ್ರಾಚಿಯೋಸೌರಿಡ್‌ನದ್ದು ಎನ್ನಲಾಗ್ತಿದೆ.