ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಪತ್ತೆಯಾಗಿದೆ. ಸಂಶೋಧಕರ ಪ್ರಕಾರ ಈ ಮೀನಿನ ತೂಕ 661 ಪೌಂಡ್‌ಗಳು ಅಂದರೆ ಸುಮಾರು 300 ಕೆಜಿ. ಮೀನು ಇಷ್ಟೊಂದು ಭಾರವಾಗಿರಬಹುದೆಂಬ ಕಲ್ಪನೆಯೂ ಇಲ್ಲಿನ ಸ್ಥಳೀಯರಿಗಿರಲಿಲ್ಲ.
ಭಾರೀ ಗಾತ್ರದ ಮೀನಾಗಿದ್ದರಿಂದ ನೀರಿನಿಂದ ಅದನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯ್ತು. ಅನೇಕರು ಒಟ್ಟಾಗಿ ಮೀನನ್ನು ಹೊರಕ್ಕೆಳೆದಿದ್ದಾರೆ. ಈ ಮೀನಿನ ಹೆಸರು ‘ಬೋರಮಿ’ ಅಂದರೆ ಹುಣ್ಣಿಮೆ. ಬಲ್ಬಸ್ ಆಕಾರದಲ್ಲಿರುವುದರಿಂದ ಮೀನಿಗೆ ಬೋರಮಿ ಎಂಬ ಹೆಸರನ್ನು ನೀಡಲಾಗಿದೆ. ಈ ಮತ್ಸ್ಯ 4-ಮೀಟರ್ ಉದ್ದವಾಗಿದೆ.
ಇದಕ್ಕೆ ಎಲೆಕ್ಟ್ರಾನಿಕ್ ಟ್ಯಾಗ್ ಮಾಡಿ ನಂತರ ಮತ್ತೆ ಮೆಕಾಂಗ್ ನದಿಗೆ ಬಿಡಲಾಯಿತು. ಮೀನಿನ ನಡವಳಿಕೆಯ ಮೇಲೆ ಕಣ್ಣಿಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಎಲೆಕ್ಟ್ರಾನಿಕ್ ಅನ್ನು ಟ್ಯಾಗ್ ಮಾಡಿರುತ್ತಾರೆ. ಸಮುದ್ರ ಅಥವಾ ಅದರ ರಹಸ್ಯಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಸುದ್ದಿ ತಮಾಷೆ ಮತ್ತು ಸಂತೋಷದಾಯಕವೆನಿಸುತ್ತದೆ. ಈ ಹಿಂದೆ 2005 ರಲ್ಲಿ ಕ್ಯಾಟ್ ಫಿಶ್ ಒಂದನ್ನು ಥೈಲ್ಯಾಂಡ್‌ನಲ್ಲಿ ಹಿಡಿಯಲಾಗಿತ್ತು. ಅದು 645 ಪೌಂಡ್ ತೂಕವಿತ್ತು.
ನದಿ ಆಯೋಗದ ಪ್ರಕಾರ, ವಿಶ್ವದ ಅತ್ಯಂತ ವೈವಿಧ್ಯಮಯ ಮೀನುಗಳನ್ನು ಹೊಂದಿರುವ ಸ್ಥಳಗಳ ಪೈಕಿ ಮೆಕಾಂಗ್ ಮೂರನೇ ಸ್ಥಾನದಲ್ಲಿದೆ. ಮನುಷ್ಯರು ಮಾಡುವ ಮಾಲಿನ್ಯ, ಉಪ್ಪು ನೀರಿನ ಸಮಸ್ಯೆಯಿಂದಾಗಿ ಮೀನುಗಳಿಗೆ ಕೂಡ ಉಳಿಗಾಲವಿಲ್ಲದಂತಾಗಿದೆ. ನದಿ ರಕ್ಷಣೆ ಸೇರಿದಂತೆ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಂಡರೂ ಅಲ್ಲಲ್ಲಿ ಮೀನುಗಳ ಸಾಮೂಹಿಕ ಸಾವು ಸಂಭವಿಸುತ್ತಲೇ ಇರುತ್ತದೆ. ಈಗ ಸೆರೆ ಸಿಕ್ಕಿದ್ದ ಸ್ಟಿಂಗ್ರೇಯಂತಹ ಸೂಕ್ಷ್ಮ ಮೀನುಗಳಿಗೆ ಬದುಕಲು ಸಾಧ್ಯವಾಗುತ್ತಿಲ್ಲ.