
ಶ್ರೀಲಂಕಾ ಮಾತ್ರವಲ್ಲ ಇಂಡೋನೇಷ್ಯಾದ ಜನತೆ ಕೂಡ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಿಂದಾಗಿ, ಸಂಸ್ಕರಿಸಿದ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಗಗನಕ್ಕೇರಿವೆ.
ಇದೀಗ ಇಂಡೋನೇಷ್ಯಾದಲ್ಲಿ ಪಾಮ್ ಆಯಿಲ್ ಬೆಲೆ ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಳವಾಗಿದೆ. ಇಂಡೋನೇಷ್ಯಾದಲ್ಲಿ 1 ಲೀಟರ್ ಪಾಮ್ ಆಯಿಲ್ ಬೆಲೆ 22,000 ರೂಪಾಯಿಗೆ ಏರಿಕೆಯಾಗಿದೆ.
ಪಾಮ್ ಆಯಿಲ್ ಅನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ದೇಶವೇ ಇಂಡೋನೇಷ್ಯಾ. ಆದ್ರೀಗ ಖುದ್ದು ಈ ರಾಷ್ಟ್ರವೇ ಸಂಕಟದಲ್ಲಿದೆ. ಇದಕ್ಕೆ ಕಾರಣ ಇಂಡೋನೇಷ್ಯಾ ಅಗತ್ಯಕ್ಕಿಂತ ಹೆಚ್ಚು ಪಾಮ್ ಆಯಿಲ್ ಅನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಇದರಿಂದಾಗಿ ದೇಶದ ಜನರು ಪಾಮ್ ಆಯಿಲ್ ಕೊರತೆಯನ್ನು ಎದುರಿಸುತ್ತಿದ್ದಾರೆ.
ಇಲ್ಲಿ ಪಾಮ್ ಆಯಿಲ್ ಅನ್ನು ಚಿನ್ನದೊಂದಿಗೆ ಹೋಲಿಸಲಾಗುತ್ತಿದೆ. ಯಾಕಂದ್ರೆ ಶುದ್ಧೀಕರಿಸಿದ 1 ಲೀಟರ್ ಪಾಮ್ ಆಯಿಲ್ ಬೆಲೆ ಈಗ 22,000 ರೂಪಾಯಿ ಆಗಿದೆ. ಈ ಬೆಲೆ ಏರಿಕೆಯ ಪರಿಣಾಮ ಕೇವಲ ಇಂಡೋನೇಷ್ಯಾದ ಮೇಲೆ ಮಾತ್ರವಲ್ಲ ಇಡೀ ಜಗತ್ತಿನ ಮೇಲೂ ಆಗ್ತಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಪಾಮ್ ಆಯಿಲ್ ಬೆಲೆ ವಿಪರೀತಕ್ಕೆ ಹೋಗಲು ಪ್ರಮುಖ ಕಾರಣ ರಷ್ಯಾ-ಉಕ್ರೇನ್ ಯುದ್ಧ.
ಈ ದೇಶಗಳು ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯ ಅತಿದೊಡ್ಡ ಉತ್ಪಾದಕರು. ಅಂತರಾಷ್ಟ್ರೀಯ ಮಾರುಕಟ್ಟೆಗೆ ಅವರ ಕೊಡುಗೆ ಸುಮಾರು 80 ಪ್ರತಿಶತದಷ್ಟಿದೆ. ಆದರೆ ಫೆಬ್ರವರಿ 24ರ ನಂತರ ಯುದ್ಧದಿಂದಾಗಿ ಎರಡೂ ದೇಶಗಳಿಂದ ತೈಲ ಪೂರೈಕೆಯನ್ನು ನಿಲ್ಲಿಸಲಾಯ್ತು. ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆ ಸಿಗದೇ ಇದ್ದಾಗ ಜನರು ಹೆಚ್ಚಿನ ಪ್ರಮಾಣದಲ್ಲಿ ಪಾಮ್ ಆಯಿಲ್ ಖರೀದಿಸಲು ಆರಂಭಿಸಿದ್ದಾರೆ.
ಬೇಡಿಕೆ ಹೆಚ್ಚಾಗಿದ್ರಿಂದ ಪಾಮ್ ಆಯಿಲ್ ಬೆಲೆ ಕೂಡ ಗಗನಕ್ಕೇರಿದೆ. ಇಂಡೋನೇಷ್ಯಾ ಸರ್ಕಾರವು ಬೆಲೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ಸಂಗ್ರಹಣೆ ಹೆಚ್ಚಾಗತೊಡಗಿತು. ಇಂಡೋನೇಷ್ಯಾ ಸರ್ಕಾರವು ಒಂದು ಲೀಟರ್ ಬ್ರಾಂಡೆಡ್ ತೈಲದ ಬೆಲೆಯನ್ನು 14,000 ರೂಪಾಯಿ ಮತ್ತು CPO ಬೆಲೆ 9,300 ರೂ.ಗೆ ನಿಗದಿಪಡಿಸಿದೆ. ಸಾಮಾನ್ಯ ಜನರು ಒಂದು ಬಾರಿಗೆ ಕೇವಲ 2 ಲೀಟರ್ ತೈಲವನ್ನು ಮಾತ್ರ ಖರೀದಿಸಲು ಸಾಧ್ಯ.
CPO ರಫ್ತುದಾರರಿಗೆ ಉತ್ಪನ್ನದ ಶೇ.30ರಷ್ಟನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಯಿತು. ಆದರೆ ಉದ್ಯಮಿಗಳು ಅದನ್ನು ಒಪ್ಪಲಿಲ್ಲ, ಪಾಮ್ ಆಯಿಲ್ ಅನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಭಾರತವು ಸಸ್ಯಜನ್ಯ ಎಣ್ಣೆಯ ಅತಿದೊಡ್ಡ ಆಮದುದಾರ ರಾಷ್ಟ್ರ.
ಭಾರತದ ಖಾದ್ಯ ತೈಲಗಳ ಬಳಕೆಯಲ್ಲಿ ಸುಮಾರು 60 ಪ್ರತಿಶತವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಖಾದ್ಯ ತೈಲಗಳ ಆಮದಿನಲ್ಲಿ ಶೇ.60 ರಷ್ಟು ಪಾಲು ಪಾಮ್ ಆಯಿಲ್‌ನದ್ದು. ಇಂಡೋನೇಷ್ಯಾದ ಪಾಮ್ ಆಯಿಲ್ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಖಾದ್ಯ ತೈಲಗಳ ಬೆಲೆಯನ್ನು 20 ರಿಂದ 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ.