ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಜನಪ್ರಿಯ ಉಳಿತಾಯಗಳಲ್ಲೊಂದು. ಸ್ಥಿರವಾದ ಆದಾಯವನ್ನು ಖಾತರಿಪಡಿಸುವ ಸುರಕ್ಷಿತ ಆಯ್ಕೆ ಇದಾಗಿದೆ. ಈ ಯೋಜನೆಯಲ್ಲಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ ಸಮಯದಲ್ಲಿ ಸಾಕಷ್ಟು ಮೊತ್ತ ಸಿಗುತ್ತದೆ.
ಸರ್ಕಾರದ ಟ್ರಿಪಲ್ ತೆರಿಗೆ ವಿನಾಯಿತಿಗಳ ಪ್ರಯೋಜನಗಳನ್ನು ಪಡೆಯಬಹುದಾದ ಕೆಲವೇ ಕೆಲವು ಹೂಡಿಕೆ ಆಯ್ಕೆಗಳಲ್ಲಿ PPF ಕೂಡ ಒಂದು. ಈ ನಿಯಮದ ಅಡಿಯಲ್ಲಿ ಫಲಾನುಭವಿಗಳು ಮೂರು ಬಾರಿ ತೆರಿಗೆ ವಿನಾಯಿತಿಗಳನ್ನು ಪಡೆಯುತ್ತಾರೆ, ಅಂದರೆ ಹೂಡಿಕೆ, ಸಂಚಯ ಮತ್ತು ಹಿಂಪಡೆಯುವಿಕೆಯ ಸಮಯದಲ್ಲಿ.
ನಿಯಮಗಳ ಪ್ರಕಾರ, ಖಾತೆದಾರ ಅಂಚೆ ಕಛೇರಿಯಿಂದ ತೆರೆದಿರುವ ತನ್ನ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಅಂದರೆ ವರ್ಷಕ್ಕೆ 1.5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಮಾಸಿಕ ಅಥವಾ ವಾರ್ಷಿಕ ಠೇವಣಿ ಮಾಡಲು ಅವಕಾಶವಿದೆ, ಆದ್ರೆ ನಿಗದಿತ ಮೊತ್ತವನ್ನು ಮೀರುವಂತಿಲ್ಲ.
ನಿಮ್ಮ ಪಿಎಫ್ ಖಾತೆಯನ್ನು ಹೆಚ್ಚು ಸೂಕ್ತವಾಗಿ ಬಳಸಿಕೊಳ್ಳಲು ಯಾವುದೇ ತಿಂಗಳ 1ನೇ ಮತ್ತು 4ನೇ ತಾರೀಖಿನ ನಡುವೆ ತೆರೆಯಬೇಕು. ಎಪ್ರಿಲ್ ತಿಂಗಳು ಎಲ್ಲಕ್ಕಿಂತ ಉತ್ತಮ, ಆ ದಿನಾಂಕಗಳ ನಡುವೆಯೇ ಠೇವಣಿ ಇಡಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ. ಸಂಬಳದ ತೆರಿಗೆದಾರರು ಟ್ಯಾಕ್ಸ್ ಉಳಿಸಲು ಹಣಕಾಸು ವರ್ಷದ ಅಂತ್ಯದಲ್ಲಿ PF ಖಾತೆಯನ್ನು ತೆರೆಯುತ್ತಾರೆ.
PF ಖಾತೆಯನ್ನು ಏಪ್ರಿಲ್ 1 ರಿಂದ ಏಪ್ರಿಲ್ 4ರೊಳಗೆ ತೆರೆದರೆ ಖಾತೆದಾರರು ಹಣಕಾಸು ವರ್ಷದಲ್ಲಿ ಗರಿಷ್ಠ ಬಡ್ಡಿ ಮೊತ್ತವನ್ನು ಪಡೆಯುತ್ತಾರೆ. ಏಪ್ರಿಲ್ 4ರ ನಂತರ ಖಾತೆ ತೆರೆದರೆ ಮೇ ತಿಂಗಳಿನಿಂದ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಇದಕ್ಕೆ ಕಾರಣ ಸರಳವಾಗಿದೆ. PF ನಿಯಮಗಳ ಪ್ರಕಾರ, ಐದನೇ ದಿನದ ಅಂತ್ಯ ಮತ್ತು ತಿಂಗಳ ಅಂತ್ಯದ ನಡುವೆ ಖಾತೆಯಲ್ಲಿನ ಕಡಿಮೆ ಬ್ಯಾಲೆನ್ಸ್‌ನಲ್ಲಿ ಕ್ಯಾಲೆಂಡರ್ ತಿಂಗಳಿಗೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.
ಈ ಬಡ್ಡಿಯನ್ನು ಕೊನೆಯಲ್ಲಿ PF ಖಾತೆಗೆ ಜಮಾ ಮಾಡಲಾಗುತ್ತದೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ವಾರ್ಷಿಕ ಶೇ.7.1ರಷ್ಟು ಬಡ್ಡಿ ದೊರೆಯುತ್ತದೆ. ಇದು ತೆರಿಗೆ ಮುಕ್ತವಾಗಿದೆ. ಪಿಎಫ್ ಖಾತೆದಾರರು ವರ್ಷಕ್ಕೆ ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ. 15 ವರ್ಷಗಳ ಮೆಚ್ಯೂರಿಟಿ ಬಳಿಕ ಕಾರ್ಪಸ್ ಅನ್ನು ಪಾವತಿಸಲಾಗುತ್ತದೆ. ಹೂಡಿಕೆದಾರರು ತಮ್ಮ ಖಾತೆಗಳನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಲು ಕೂಡ ಅವಕಾಶವಿದೆ.