ಗರ್ಭಿಣಿಯರಿಗೆ ನವ ಮಾಸಗಳು ತುಂಬಿ ಮಗುವಿಗೆ ಜನ್ಮ ನೀಡುವ ಮುನ್ನ ಹಿಂದೂ ಸಂಪ್ರದಾಯದಲ್ಲಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ.
ಗರ್ಭಿಣಿಯರಿಗೆ ಇಷ್ಟವಾದ ತಿನಿಸುಗಳನ್ನು ಹಾಕಿ ಅವರಿಗೆ ಈ ಶಾಸ್ತ್ರವನ್ನು ಮಾಡಲಾಗುತ್ತದೆ. ಆದರೆ ಎಂದಾದರೂ ನೀವು ಕತ್ತೆಗಳಿಗೆ ಸೀಮಂತ ಶಾಸ್ತ್ರ ನೆರವೇರಿಸುವುದನ್ನು ಕೇಳಿದ್ದೀರೇ..?
ಗುಜರಾತ್ನ ಸೌರಾಷ್ಟ್ರ ಎಂಬಲ್ಲಿ ಇದೇ ಮೊದಲ ಬಾರಿಗೆ ಕತ್ತೆಗೆ ಸೀಮಂತ ಶಾಸ್ತ್ರವನ್ನು ಮಾಡಲಾಗಿದೆ. ಇಲ್ಲಿನ ಸ್ಥಳೀಯ ತಳಿಯಾದ ಹಲರಿ ಕತ್ತೆಯೊಂದಕ್ಕೆ ಸೀಮಂತ ಶಾಸ್ತ್ರ ಮಾಡಿದ್ದಾರೆ. ಒಟ್ಟು 439 ಸಂಖ್ಯೆಯನ್ನು ಹೊಂದಿರುವ ಹಲರಿ ಕತ್ತೆಗಳು ಪ್ರಸ್ತುತ ವಿನಾಶದ ಅಂಚಿನಲ್ಲಿವೆ.
ಅಳಿವಿನ ಅಂಚಿನಲ್ಲಿರುವ ಈ ನಿರ್ದಿಷ್ಟ ತಳಿಯ ಕತ್ತೆಗಳನ್ನು ಸಂರಕ್ಷಿಸಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕುರುಬ ಸಮುದಾಯಕ್ಕೆ ಸೇರಿದ ಕುಟುಂಬಗಳು ಗರ್ಭಿಣಿ ಹಲರಿ ಕತ್ತೆಗೆ ಸೀಮಂತ ಶಾಸ್ತ್ರವನ್ನು ನೆರವೇರಿಸಿದೆ.
ಈ ಕಾರ್ಯಕ್ರಮವನ್ನು ನೆರವೇರಿಸಲು ಕುರುಬ ಸಮಾಜದ ಕುಟುಂಬಗಳಿಗೆ ನಾವು ಸಹಾಯ ಮಾಡಿದ್ದೇವೆ. ಈ ಕತ್ತೆಗಳನ್ನು ಸಂರಕ್ಷಿಸುವಂತೆ ನಾವು ಈ ಮೂಲಕ ಜನರಿಗೆ ಸಂದೇಶವನ್ನು ನೀಡಲು ಯತ್ನಿಸಿದ್ದೇವೆ ಎಂದು ಭುಜ್ ಮೂಲಕ ಎನ್ಜಿಓ ಸಹಜೀವನ್ ರಮೇಶ್ ಭಟ್ಟಿ ಹೇಳಿದರು.
ಈ ಕಾರ್ಯಕ್ರಮಕ್ಕೆ ರಾಜಕೋಟ್ ಜಿಲ್ಲೆಯ ಉಪ್ಲೇಟಾದಲ್ಲಿ ಸುಮಾರು 100 ಮಂದಿ ಕತ್ತೆ ಮಾಲೀಕರು 33 ಗರ್ಭಿಣಿ ಕತ್ತೆಗಳ ಸಮೇತ ಸೀಮಂತ ಕಾರ್ಯ ನಡೆಯುವ ಸ್ಥಳಕ್ಕೆ ಜಮಾಯಿಸಿದ್ದರು. ಇವುಗಳಲ್ಲಿ ಧೋರಿ ಎಂಬ ಹೆಸರಿನ ಉತ್ತಮ ಕತ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಯ್ತು.
ನಾವು ಮನೆಯಲ್ಲಿ ಗರ್ಭಿಣಿಗೆ ಮಾಡುವಂತೆ ಎಲ್ಲಾ ಶಾಸ್ತ್ರಗಳನ್ನು ಧೋರಿಗೆ ಮಾಡಿದ್ದೇವೆ. ಈ ತಳಿಯ ಕತ್ತೆಗಳನ್ನು ಜೀವಂತವಾಗಿಡಲು ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ನಾವು ಮಾಡಿದ್ದೇವೆ. ನಮ್ಮ ಮನೆಯಲ್ಲಿ ಧೋರಿ ಸೇರಿದಂತೆ 8 ಕತ್ತೆಗಳಿವೆ ಎಂದು ಮಾಲೀಕರು ಹೇಳಿದರು.