ಮನುಷ್ಯನಿಗೆ ಮಾನವೀಯತೆ ಮುಖ್ಯ ಅಂತಾ ಪ್ರತಿಯೊಬ್ಬರು ಪಾಠ ಮಾಡುತ್ತಾರೆ. ಆದರೆ ತಮ್ಮ ಮಾನವೀಯತೆ ತೋರಿಸುವ ಸಂದರ್ಭ ಬಂದಾಗ ಕಾಲ್ಕೀ ಳುವ ಜನರೇ ಹೆಚ್ಚು. ಅಂತಾ ಅಪರೂಪದಲ್ಲಿ ಅಪರೂಪದ ಜನರಲ್ಲಿ, ಈ 17 ವರ್ಷದ ಭಾರತೀಯ ವಿದ್ಯಾರ್ಥಿನಿ ಒಬ್ಬಳು. ಈಕೆ ತನ್ನ ಮಾಲೀಕನ ಕುಟುಂಬಕ್ಕಾಗಿ, ಪ್ರಾಣತ್ಯಾಗಕ್ಕು ಸಿದ್ಧಳಾಗಿದ್ದಾಳೆ.
ಹೌದು, ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರ, ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಾಚರಣೆ ಮಾಡುತ್ತಿದೆ. ಈ ಭೀಕರ ಸಂದರ್ಭದಲ್ಲೂ, ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹರ್ಯಾಣದ ನೇಹಾ, ಯುದ್ಧ ಪೀಡಿತ ದೇಶದಿಂದ ತೆರವುಗೊಳ್ಳುವ ಅವಕಾಶ ಸಿಕ್ಕರೂ ಆ ದೇಶವನ್ನು ತೊರೆಯಲು ನಿರಾಕರಿಸಿದ್ದಾಳೆ.
ನೇಹಾ, ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದ ಮನೆಯ ಮಾಲೀಕರು ಈ ಯುದ್ಧದ ಸಂದರ್ಭದಲ್ಲಿ ತನ್ನ ದೇಶಕ್ಕೆ ಸೇವೆ ಸಲ್ಲಿಸಲು, ಉಕ್ರೇನಿಯನ್ ಸೈನ್ಯಕ್ಕೆ ಸ್ವಯಂಪ್ರೇರಿತರಾಗಿ ಸೇರಿದ್ದಾರೆ. ಆದ್ದರಿದ ಭಾರತದ ವಿದ್ಯಾರ್ಥಿನಿ ನೇಹಾ, ಮೂರು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಮನೆಯ ಮಾಲೀಕರ ಪತ್ನಿಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದಾಳೆ ಎಂದು ವರದಿಯಾಗಿದೆ.
ಇನ್ನು ನೇಹಾ ಹರ್ಯಾಣದ ಚಾರ್ಖಿ ಜಿಲ್ಲೆಯವಳು ಎಂದು ತಿಳಿದು ಬಂದಿದೆ. ಭಾರತೀಯ ಸೈನ್ಯದಲ್ಲಿದ್ದ ತನ್ನ ತಂದೆಯನ್ನು ಕಳೆದುಕೊಂಡ ಮೇಲೆ, ಆಕೆ ತನ್ನ ವೈದ್ಯಕೀಯ ಪದವಿ ಓದಲು ಕಳೆದ ವರ್ಷ ಉಕ್ರೇನ್ ದೇಶಕ್ಕೆ ಶಿಫ್ಟ್ ಆಗಿದ್ದಳೆಂದು ತಿಳಿದು ಬಂದಿದೆ. ನೇಹಾಗೆ ಹಾಸ್ಟೆಲ್ ಸೌಕರ್ಯ ಸಿಗದ ಕಾರಣ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಎಂಜಿನಿಯರ್ ಒಬ್ಬರ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಈಗ ಆಕೆ ಅದೇ ಮಾಲೀಕರ ಪತ್ನಿ ಹಾಗೂ ಮೂರು ಮಕ್ಕಳೊಂದಿಗೆ ಬಂಕರ್ ಒಂದರಲ್ಲಿ ಬೀಡು ಬಿಟ್ಟಿದ್ದಾಳೆಂದು ವರದಿಯಾಗಿದೆ.
ನಾನು ಬದುಕಬಹುದು ಅಥವಾ ಬದುಕದಿರಬಹುದು, ಆದರೆ ನಾನು ಈ ಮಕ್ಕಳನ್ನು ಹಾಗೂ ಅವರ ತಾಯಿಯನ್ನು ಇಂತಹ ಪರಿಸ್ಥಿತಿಯಲ್ಲಿ ಕೈ ಬಿಡುವುದಿಲ್ಲ ಎಂದು ನೇಹಾ, ಶಿಕ್ಷಕಿಯಾಗಿರುವ ತನ್ನ ತಾಯಿಗೆ ಹೇಳಿದ್ದಾರೆ.
ನಾವು ಹೊರಗೆ ಆಗುತ್ತಿರುವ ಸ್ಫೋಟಗಳನ್ನು ಕೇಳುತ್ತಲೇ ಇದ್ದೇವೆ, ಆದರೆ ಇಲ್ಲಿಯವರೆಗೂ, ನಮಗೆ ಯಾವ ತೊಂದರೆಯು ಆಗಿಲ್ಲಾ, ನಾವು ಚೆನ್ನಾಗಿಯೇ ಇದ್ದೇವೆ’ ಎಂದು ನೇಹಾ ಇತ್ತೀಚೆಗೆ ಕುಟುಂಬದ ಸ್ನೇಹಿತರೊಬ್ಬರಿಗೆ ತಿಳಿಸಿದ್ದಾರೆ.
ಮನೆ ಮಾಲೀಕರು ಹಾಗೂ ಅವರ ಮಕ್ಕಳಿಗೆ ಹತ್ತಿರವಾಗಿರುವ ನೇಹಾ ಇಂತಹ ಸಂದರ್ಭದಲ್ಲು ಅವರೊಂದಿಗೆ ನಿಂತಿದ್ದಾಳೆ. ಯುದ್ಧವು ಸನ್ನಿಹಿತವಾಗುತ್ತಿದ್ದಂತೆ ದೇಶವನ್ನು ತೊರೆಯಲು ಆಕೆಗೆ ತಿಳಿಸಲಾಗಿತ್ತು. ಆಕೆಯ ತಾಯಿ ತನ್ನ ಮಗಳ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲು ತೀವ್ರ ಪ್ರಯತ್ನಗಳನ್ನು ಮಾಡಿದ್ದರು. ಅಂತಿಮವಾಗಿ ಬಾಲಕಿಗೆ ರೊಮೇನಿಯಾಗೆ ಹೋಗಲು ಅವಕಾಶ ಸಿಕ್ಕಿತು. ಆದರೆ ಈ ನಿರ್ಣಾಯಕ ಹಂತದಲ್ಲಿ ತಾನು ವಾಸಿಸುತ್ತಿದ್ದ, ತನಗೆ ಪ್ರೀತಿ ಮತ್ತು ಆಶ್ರಯ ನೀಡಿದ ಕುಟುಂಬವನ್ನು ತ್ಯಜಿಸಲು ಆಕೆ ನಿರಾಕರಿಸಿದ್ದಾಳೆ, ಎಂದು ನೇಹಾ ಅವರ ತಾಯಿಯ ಆಪ್ತ ಸ್ನೇಹಿತೆ ಸವಿತಾ ಜಾಖರ್ ತಿಳಿಸಿದ್ದಾರೆ.