
ಮಕ್ಕಳಿರಲವ್ವ ಮನೆ ತುಂಬಾ ಅಂತಾ ಹಿರಿಯರು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಗೆ ಮಕ್ಕಳನ್ನು ಹೆರುವುದೇ ಒಂದು ಕೆಲಸವಾಗಿತ್ತು ಎಂದ್ರೆ ತಪ್ಪಾಗಲಾರದು. 10-12 ಮಕ್ಕಳನ್ನು ಹಡೆಯುತ್ತಿದ್ದಳು ಮಹಿಳೆ.
ಆದ್ರೀಗ ಎಲ್ಲವೂ ಬದಲಾಗಿದೆ. ಆರತಿಗೊಂದು ಮಗಳು, ಕೀರುತಿಗೊಂದು ಮಗ ಅಂದುಕೊಂಡು ಎರಡು ಮಕ್ಕಳನ್ನು ಪಡೆಯುತ್ತಿದ್ದ ಕಾಲವೂ ಈಗಿಲ್ಲ. ಈಗೇನಿದ್ದರೂ ಗಂಡಾಗ್ಲಿ, ಹೆಣ್ಣಾಗ್ಲಿ ಒಂದೇ ಮಗು ಸಾಕು ಎನ್ನುತ್ತಿದ್ದಾರೆ ಮಹಿಳೆಯರು.
ಈ ಬಗ್ಗೆ ನಡೆದ ಸರ್ವೆಯೊಂದು ಇದನ್ನೇ ಹೇಳಿದೆ. ನಗರಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಹಿಳೆಯರು ಈ ನಿಯಮ ಪಾಲಿಸುತ್ತಿದ್ದಾರೆ. ನಗರದ ಶೇಕಡಾ 35ರಷ್ಟು ತಾಯಂದಿರು ಒಂದೇ ಮಗು ಸಾಕು ಎನ್ನುತ್ತಾರೆ. ಮಕ್ಕಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗೋದಿಲ್ಲ ಎನ್ನುವುದೇ ಬಹುಮುಖ್ಯ ಕಾರಣವಾಗಿದೆ.
ಕುಟುಂಬ ನಿರ್ವಹಣೆ, ಕೆಲಸದ ಒತ್ತಡ ಹಾಗೂ ಮಕ್ಕಳಿಗೆ ಬರುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಇನ್ನೊಂದು ಮಗು ಬೇಡ ಎನ್ನುತ್ತಿದ್ದಾರೆ ತಾಯಂದಿರು. ಹೆಚ್ಚು ಮಹಿಳೆಯರು ಇನ್ನೊಂದು ಮಗು ಬೇಡ ಎಂದಿದ್ದಾರೆ.
ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಕಾಡುವ ಸಾಧ್ಯತೆ ಇದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಮೊದಲು ಹುಟ್ಟುವ ಮಗು ಯಾವುದು ಎಂಬುದರ ಮೇಲೆ ಎರಡನೇ ಮಗುವಿನ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಬಹುತೇಕ ಮಹಿಳೆಯರ ಪ್ರಕಾರ ಒಂದೇ ಮಗು ಎಂಬ ನಿಯಮಕ್ಕೆ ಪತಿಯ ಸಹಮತವಿಲ್ಲವಂತೆ.