ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್, UAE ಯಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ದ್ರಾವಿಡ್‌ಗೆ ಕೊರೊನಾ ಸೋಂಕು ತಗುಲಿದ್ದು, ಈಗಾಗ್ಲೇ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದಿದೆ.
ಆಗಸ್ಟ್ 27ರಿಂದ ಏಷ್ಯಾ ಕಪ್ ಟೂರ್ನಿ ಆರಂಭವಾಗ್ತಿದೆ. ಟೂರ್ನಿಗಾಗಿ ಹೊರಟಿದ್ದ ಟೀಂ ಇಂಡಿಯಾದ ಎಲ್ಲಾ ಸದಸ್ಯರನ್ನೂ ನಿಯಮದಂತೆ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ಈ ವೇಳೆ ರಾಹುಲ್ ದ್ರಾವಿಡ್ ಅವರ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.
ದ್ರಾವಿಡ್‌ಗೆ ಕೊರೊನಾ ಲಕ್ಷಣಗಳೇನೂ ಇಲ್ಲ. ಆದರೂ ಬಿಸಿಸಿಐನ ವೈದ್ಯಕೀಯ ತಂಡ ನಿಗಾ ವಹಿಸಿದೆ. ಕೊರೊನಾ ವರದಿ ನೆಗೆಟಿವ್ ಬಂದ ನಂತರ ದ್ರಾವಿಡ್ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಅಂತಾ ಬಿಸಿಸಿಐ ತಿಳಿಸಿದೆ.
ಆಗಸ್ಟ್ 23ರಂದೇ ದ್ರಾವಿಡ್ ಯುಎಇಗೆ ಪ್ರಯಾಣ ಬೆಳೆಸಬೇಕಿತ್ತು. ಆದ್ರೆ ಕೋವಿಡ್ ಹಿನ್ನೆಲೆಯಲ್ಲಿ ಅವರು ಭಾರತದಲ್ಲೇ ಉಳಿದುಕೊಂಡಿದ್ದಾರೆ. ಏಷ್ಯಾ ಕಪ್‌ಗೆ ದ್ರಾವಿಡ್ ಅಲಭ್ಯರಾಗಬಹುದು ಅಂತಾನೂ ಹೇಳಲಾಗ್ತಿದೆ. ಟೂರ್ನಿಯ ಆರಂಭಿಕ ಪಂದ್ಯಗಳು ಮಿಸ್ಸಾದ್ರೂ ನಂತರ ಅವರು ಯುಎಇಗೆ ತೆರಳುವ ಸಾಧ್ಯತೆಯೂ ಇದೆ.
ದ್ರಾವಿಡ್ ಅಲಭ್ಯತೆಯಲ್ಲಿ ಎನ್‌ಸಿಎ ನಿರ್ದೇಶಕರಾಗಿರುವ ವಿವಿಎಸ್ ಲಕ್ಷ್ಮಣ್ ತರಬೇತುದಾರರ ಜವಾಬ್ಧಾರಿ ಹೊತ್ತುಕೊಳ್ಳಲಿದ್ದಾರೆ ಅಂತಾ ಹೇಳಲಾಗ್ತಿದೆ. ಈ ಹಿಂದೆ ಸಹ ಎರಡು ಬಾರಿ ಲಕ್ಷ್ಮಣ್ ಇದೇ ರೀತಿ ಐರ್ಲೆಂಡ್‌ನಲ್ಲಿ ನಡೆದ ಟಿ-20 ಹಾಗೂ ಜಿಂಬಾಬ್ವೆ ಪ್ರವಾಸದ ವೇಳೆ ದ್ರಾವಿಡ್‌ಗೆ ನೆರವಾಗಿದ್ದರು.
ಸಪ್ಟೆಂಬರ್ 11ರಂದು ಏಷ್ಯಾ ಕಪ್ ಟೂರ್ನಿ ಮುಕ್ತಾಯವಾಗಲಿದೆ. ಸರಣಿಯಲ್ಲಿ ಆಗಸ್ಟ್ 28ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಆಗಸ್ಟ್ 31ರಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.