ಬೇಸಿಗೆಯಿರಲಿ, ಮಳೆಗಾಲವಿರಲಿ ಅನೇಕರು ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ. ತಂಪು ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯಿರುತ್ತದೆ. ಇದು ಜೀರ್ಣಾಂಗ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ತಂಪು ಪಾನೀಯಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.
ತಂಪು ಪಾನೀಯಗಳು ಆರೋಗ್ಯಕ್ಕೆ ಅಪಾಯಕಾರಿ ಎಂಬುದು ತಿಳಿದಿದ್ದರೂ ಯುವಕರು ಇದನ್ನು ಹೆಚ್ಚಾಗಿ ಸೇವನೆ ಮಾಡ್ತಿದ್ದಾರೆ. ಹೊಸ ಅಧ್ಯಯನವೊಂದರ ಪ್ರಕಾರ, ತಂಪು ಪಾನೀಯ ಸೇವನೆಯಿಂದ ಯುವಕರಲ್ಲಿ ಕರುಳಿನ ಕ್ಯಾನ್ಸರ್ ಹಾಗೂ ಗುದನಾಳದ ಕ್ಯಾನ್ಸರ್ ಹೆಚ್ಚಾಗ್ತಿದೆ. ಮಹಿಳೆಯರಲ್ಲೂ ಈ ಕ್ಯಾನ್ಸರ್ ಕಾಣಿಸಿಕೊಳ್ತಿದೆ.
ತಂಪು ಪಾನೀಯ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ಇದು ಸ್ನಾಯುಗಳಿಗೆ ಬಲ ನೀಡುವುದಿಲ್ಲ. ಬದಲಾಗಿ ಬೊಜ್ಜನ್ನು ಹೆಚ್ಚಿಸುತ್ತದೆ. ತಂಪು ಪಾನೀಯಗಳು ಬಾಯಾರಿಕೆ ತಣಿಸುವುದಿಲ್ಲ. ಇದರಲ್ಲಿರುವ ಸೀಸ, ಕ್ಯಾಡ್ಮಿಯಮ್, ಕ್ರೋಮಿಯಂ, ಕಾರ್ಬನ್-ಡೈಆಕ್ಸೈಡ್ ಮತ್ತು ಸಕ್ಕರೆಯಂತಹ ಅಂಶಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ರುಚಿ ಹಾಗೂ ಜಾಹೀರಾತಿಗೆ ಮರುಳಾಗುವ ಯುವ ಜನತೆ ಇದನ್ನು ಹೆಚ್ಚಾಗಿ ಸೇವನೆ ಮಾಡ್ತಿದ್ದಾರೆ. ಪ್ರತಿ ದಿನ ತಂಪು ಪಾನೀಯ ಸೇವನೆ ಹೆಚ್ಚು ಅಪಾಯಕಾರಿ. ಬೇಸಿಗೆಯಲ್ಲಿ ತಂಪು ಪಾನೀಯದ ಮಾರಾಟ ದ್ವಿಗುಣಗೊಳ್ಳುತ್ತದೆ.
ತಜ್ಞರ ಪ್ರಕಾರ, ದಿನಕ್ಕೆ ಒಂದು ಸಕ್ಕರೆ ಪಾನೀಯ ಸೇವನೆ ಮಾಡುವುದ್ರಿಂದ ಕ್ಯಾನ್ಸರ್ ಅಪಾಯ ಶೇಕಡಾ 32ರಷ್ಟು ಹೆಚ್ಚಾಗಲಿದೆಯಂತೆ. ಉತ್ತಮ ಆರೋಗ್ಯ ಬಯಸುವವರು ತಂಪು ಪಾನೀಯದಿಂದ ದೂರವಿರುವುದು ಒಳ್ಳೆಯದು.