ಕರೋನಾ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ಬಹುತೇಕ ದೇಶಗಳು ನಿಧಾನವಾಗಿ ಆರ್ಥಿಕ ಹಿಂಜರಿತದತ್ತ ಸಾಗುತ್ತಿವೆ. ಇದರ ಪರಿಣಾಮವು ದೀರ್ಘಕಾಲದವರೆಗೆ ಗೋಚರಿಸುತ್ತದೆ. ಹೆಚ್ಚಿನ ಕಂಪನಿಗಳು ಖರ್ಚು ಉಳಿಸಲು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಅನೇಕ ಕಂಪನಿಗಳು ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸಿವೆ.
ಆದರೆ ಸಂಬಳದಲ್ಲಿ ಭಾರೀ ಹೆಚ್ಚಳ ಮಾಡಿರೋ ಸಂಸ್ಥೆಯೊಂದು ಸಾಕಷ್ಟು ಸುದ್ದಿ ಮಾಡ್ತಾ ಇದೆ. ಈ ಕಂಪನಿಯ ಸಿಇಒ ತನ್ನ ಉದ್ಯೋಗಿಗಳಿಗೆ ವರ್ಷಕ್ಕೆ ಕನಿಷ್ಠ 80 ಸಾವಿರ ಡಾಲರ್ ಅಂದರೆ ವಾರ್ಷಿಕ ಸುಮಾರು 63,65,008 ರೂಪಾಯಿ ವೇತನ ನೀಡುತ್ತಿದ್ದಾರೆ. ಇತರ ಕಂಪನಿಗಳು ಸಹ ಸರಿಯಾದ ಸಂಬಳವನ್ನು ಪಾವತಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಸಂಸ್ಥೆಯ ಹೆಸರು ಗ್ರಾವಿಟಿ ಪೇಮೆಂಟ್ಸ್. ಸಿಯಾಟಲ್‌ನಲ್ಲಿರೋ ಈ ಕಂಪನಿಯ ಸಿಇಓ ಹೆಸರು ಡಾನ್ ಪ್ರೈಸ್.
ಪ್ರತಿ ಉದ್ಯೋಗಿಗೆ ಕನಿಷ್ಠ 80 ಸಾವಿರ ಡಾಲರ್‌ಗಳ ಪ್ಯಾಕೇಜ್ ಘೋಷಿಸಿದ್ದಾರೆ ಇವರು. ಇದು ರಿಮೋಟ್ ವರ್ಕಿಂಗ್ ಮತ್ತು ಫ್ಲೆಕ್ಸಿಬಲ್ ವರ್ಕ್ ಎರಡೂ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ರಜೆ ಕಳೆಯಲು ಸ್ವಲ್ಪ ಹಣವನ್ನು ನೀಡುತ್ತಾರೆ. ಇತರ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇಂಥದ್ದೇ ಸೌಲಭ್ಯ ಕಲ್ಪಿಸಬೇಕೆಂದು ಡ್ಯಾನ್ ಪ್ರೈಸ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕೇವಲ ಸಂಬಳದ ಪ್ಯಾಕೇಜ್ ಮಾತ್ರವಲ್ಲ ಸಿಬ್ಬಂದಿಗೆ ಇತರ ಸೌಲಭ್ಯಗಳನ್ನು ಸಹ ಕೊಡುತ್ತೇವೆ. ಅವರು ಎಲ್ಲಿ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ.
ಮಕ್ಕಳು ಜನಿಸಿದಾಗ ಪೇರೆಂಟಲ್ ರಜಾ ಪಡೆಯುವವರಿಗೆ ವೇತನ ಸಹಿತ ರಜೆಯನ್ನು ನೀಡುತ್ತದೆ ಈ ಕಂಪನಿ. ಪ್ರತಿ ಕೆಲಸಕ್ಕೆ 300 ಕ್ಕೂ ಹೆಚ್ಚು ಅರ್ಜಿದಾರರನ್ನು ಅವರು ಪಡೆಯುತ್ತಾರಂತೆ. 6 ವರ್ಷಗಳ ಹಿಂದೆಯೇ ಈ ಕಂಪನಿಯಲ್ಲಿ ಪ್ರತಿ ಉದ್ಯೋಗಿಯ ವೇತನವನ್ನು ವಾರ್ಷಿಕ 70 ಸಾವಿರ ಡಾಲರ್‌ಗೆ ಹೆಚ್ಚಿಸಲಾಗಿತ್ತು. ಈಗ ಅದನ್ನು 80 ಸಾವಿರ ಡಾಲರ್‌ಗೆ ಏರಿಕೆ ಮಾಡಲಾಗಿದೆ. ಸಂಬಳ ಹೆಚ್ಚಿಸಿದಾಗಿನಿಂದ ಕಂಪನಿಯ ಆದಾಯವೂ ಮೂರು ಪಟ್ಟು ಹೆಚ್ಚಾಗಿದೆಯಂತೆ.