
ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರಿಗೆ ಇಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಇದಕ್ಕಾಗಿ ವಿಧಾನಸೌಧದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಪುನೀತ್ ರಾಜಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ ಕುಟುಂಬಸ್ಥರು ಹಾಜರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ ಹಾಗೂ ಮೂರ್ತಿ ಪ್ರತಿಷ್ಠಾನದ ಡಾ. ಸುಧಾ ಮೂರ್ತಿ ಆಗಮಿಸಲಿದ್ದಾರೆ.
1992ರಲ್ಲಿ ಡಾ. ರಾಜಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇಂದು ಅವರ ಪುತ್ರ ದಿ. ಪುನೀತ್ ರಾಜಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರದಾನ ಮಾಡಲಾಗುತ್ತಿದೆ. ಈ ಮೂಲಕ ತಂದೆ – ಮಗ ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಿದ ಹೆಗ್ಗಳಿಕೆಗೆ ಅಣ್ಣಾವ್ರ ಕುಟುಂಬ ಪಾತ್ರವಾಗಲಿದೆ.
