ವಾತಾವರಣದ ಮಾಲಿನ್ಯ, ಕೊಳೆ, ಧೂಳು, ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಿಂದ ಮುಖದ ಚರ್ಮ ದಲ್ಲಿ ಸಮಸ್ಯೆ ಉಂಟಾಗುತ್ತದೆ. ಆಗ ಮುಖದಲ್ಲಿ ಕಲೆಗಳು, ಮೊಡವೆಗಳು, ಸುಕ್ಕುಗಳು ಮೂಡುತ್ತವೆ. ಇದರಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ನೀವು ಈ ಎಲೆಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಹಚ್ಚಿ.
ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ನೀವು ಮೆಂತ್ಯ ಎಲೆಗಳನ್ನು ಬಳಸಬಹುದು. ಮೆಂತ್ಯ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.
ಮುಖದಲ್ಲಿರುವ ಮೊಡವೆಗಳನ್ನು ನಿವಾರಿಸಲು ಪುದೀನಾ ಎಲೆಗಳನ್ನು ಬಳಸಬಹುದು. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಹಾಗಾಗಿ ಪುದೀನಾ ಎಲೆ ಜೊತೆ ಸೌತೆಕಾಯಿ ಮತ್ತು ಜೇನುತುಪ್ಪ ಸೇರಿಸಿ ರುಬ್ಬಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.
ತುಳಸಿ ಎಲೆಗಳು ಕೂಡ ಮುಖದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಹಾಗಾಗಿ ತುಳಸಿ ಎಲೆಯನ್ನು ರುಬ್ಬಿ ಅದಕ್ಕೆ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ.
ಕೊತ್ತಂಬರಿ ಸೊಪ್ಪು ಕೂಡ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಾಗಾಗಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಮೊಡವೆ ಮತ್ತು ಮಚ್ಚೆಗಳು ನಿವಾರಣೆಯಾಗುತ್ತದೆ.
ಬೇವಿನ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಮುಖದಲ್ಲಿ ಮೊಡವೆಗಳು, ಚಿಕ್ಕ ಚಿಕ್ಕ ಗುಳ್ಳೆಗಳು ಮೂಡಿದ್ದರೆ ಬೇವಿನ ಎಲೆಯನ್ನು ರುಬ್ಬಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ.