ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಹೊಂದಿರುವ ನಗರ ಬೆಂಗಳೂರು ಎಂದು ರಾಂಡ್‌ಸ್ಟಾಡ್ ಇನ್ಸೈಟ್ ಸ್ಯಾಲರಿ ಟ್ರೆಂಡ್ ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ದೆಹಲಿ ಎನ್‌ಸಿಆರ್ ಮತ್ತು ಪುಣೆ ಇವೆ.
ಇದನ್ನೋದಿದ ಮೇಲೆ ಯಾವುದು ಹೆಚ್ಚು ಸಂಭಾವನೆ ಸಿಗುವ ಉದ್ಯೋಗವೆಂಬ ಪ್ರಶ್ನೆ ಏಳುವುದು ಸಹಜ. ಕೆಲವು ಪ್ರಮುಖ ಉದ್ಯೋಗ ಪೋರ್ಟಲ್‌ಗಳ ಪ್ರಕಾರ, ಈ ಕೆಳಗಿನವುಗಳು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಗಳಾಗಿವೆ.
ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್: ಹಣಕಾಸು ಜಗತ್ತಿನಲ್ಲಿ ಹೆಚ್ಚು ಬೇಡಿಕೆಯಿರುವ ಪದಗಳಲ್ಲಿ ಇದು ಒಂದಾಗಿದೆ. ಹೂಡಿಕೆ ಬ್ಯಾಂಕರ್, ಹಣಕಾಸಿನ ಸ್ವತ್ತುಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ. ಹೂಡಿಕೆಗಳು, ಷೇರುಗಳು ಮತ್ತು ಭದ್ರತೆಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಗ್ರಾಹಕರಿಗೆ ಹೂಡಿಕೆ, ವಿತ್ ಡ್ರಾ ಸಂದರ್ಭದಲ್ಲಿ ನೆರವಾಗುತ್ತಾರೆ.
ವಾಣಿಜ್ಯ, ಹಣಕಾಸು ಅಥವಾ ಅರ್ಥಶಾಸ್ತ್ರ ಅಥವಾ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಜನರು ಈ ಉದ್ಯೋಗ ಪಡೆಯಬಹುದು. ಹೊಸಬರಿಗೆ ವರ್ಷಕ್ಕೆ 12 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ. ಅನುಭವಿ ಉದ್ಯೋಗಿಗಳು 30-50 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ.
ವೈದ್ಯಕೀಯ ಕ್ಷೇತ್ರ, ವೈದ್ಯ ವೃತ್ತಿ : ಆರೋಗ್ಯ ಕ್ಷೇತ್ರ ಮತ್ತು ವೈದ್ಯಕೀಯ ವೃತ್ತಿಪರರಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಇದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ಡೆಂಟಿಸ್ಟ್ರಿ, ಕಾರ್ಡಿಯಾಲಜಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಆಂಕೊಲಾಜಿ, ನರ್ಸಿಂಗ್, ಫಾರ್ಮಸಿ, ಹೆಲ್ತ್ ಕೇರ್ ಅಡ್ಮಿನಿಸ್ಟ್ರೇಟರ್ ಸೇರಿದಂತೆ ಬೇರೆ ಬೇರೆ ವಿಧವಿದೆ.
ನೀಟ್ ನಂತಹ ಪರೀಕ್ಷೆಯಲ್ಲಿ ಪಾಸ್ ಆದವರು ಮತ್ತು ಎಂ.ಬಿ.ಬಿ.ಎಸ್. ಪದವಿ ಪಡೆದ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯುತ್ತಾರೆ. ಹೊಸಬರಿಗೆ ವಾರ್ಷಿಕ 4-5 ಲಕ್ಷ ರೂಪಾಯಿ ವೇತನ ಸಿಗುತ್ತದೆ. ಅನುಭವಿಗಳಿಗೆ ವರ್ಷಕ್ಕೆ 17 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ.
ಚಾರ್ಟರ್ಡ್ ಅಕೌಂಟೆಂಟ್ : ದೇಶದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಬೇಡಿಕೆ ಸದಾ ಇರುತ್ತದೆ. ಹಣಕಾಸು ಲೆಕ್ಕಪತ್ರ ನಿರ್ವಹಣೆ, ತೆರಿಗೆ ನಿರ್ವಹಣೆ, ಬ್ಯಾಂಕಿಂಗ್ ಸಮಸ್ಯೆಗೆ ಪರಿಹಾರ ಮತ್ತು ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಇದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಗಳಲ್ಲಿ ಒಂದಾಗಿದೆ.
ವಾಣಿಜ್ಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರು. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾದ ಪ್ರಮಾಣೀಕೃತ ಸದಸ್ಯರಾಗಿರಬೇಕು. ಚಾರ್ಟರ್ಡ್ ಅಕೌಂಟೆಂಟ್ ಆಗಲು ಫೌಂಡೇಶನ್ ಕೋರ್ಸ್‌ಗೆ ಸೇರಿಕೊಳ್ಳಬೇಕು.
ಹೊಸಬರು ವರ್ಷಕ್ಕೆ 7 ಲಕ್ಷ ರೂಪಾಯಿ ಸಂಭಾವನೆ ಪಡೆದ್ರೆ ಅನುಭವಿಗಳು ವರ್ಷಕ್ಕೆ 20-24 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಡಾಟಾ ಸೈನ್ಟಿಸ್ಟ್ : ಡಾಟಾ ಸೈನ್ಸ್ ವೃತ್ತಿಜೀವನದ ಹೊಸ ಆಯ್ಕೆಯಾಗಿದೆ. ಇದು ಹೊಸಬರನ್ನು ಆಕರ್ಷಿಸುತ್ತಿದೆ. ಐಟಿ, ಟೆಲಿಕಾಂ, ಹಣಕಾಸು ಮತ್ತು ವಿಮೆ ಮತ್ತು ಚಿಲ್ಲರೆ ವ್ಯಾಪಾರಗಳಂತಹ ಉದ್ಯಮಗಳಲ್ಲಿ ಡಾಟಾ ವಿಜ್ಞಾನಿಗಳಿಗೆ ಬೇಡಿಕೆ ಸಾಕಷ್ಟಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಡೇಟಾ ವಿಜ್ಞಾನಿಗಳ ಸರಾಸರಿ ವೇತನ ವಾರ್ಷಿಕ 14-15 ಲಕ್ಷಗಳವರೆಗೆ ಇರುತ್ತದೆ. ಅನೇಕ ಪ್ರಮುಖ ಟೆಕ್ ಕಂಪನಿಗಳಾದ ಐಬಿಎಂ, ಅಕ್ಸೆಂಚರ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಭಾರತದಲ್ಲಿ ಡೇಟಾ ವಿಜ್ಞಾನಿಗಳನ್ನು ನೇಮಿಸಿಕೊಳ್ಳುತ್ತವೆ.
ಐಟಿ, ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು, ಡೇಟಾ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದು. ಐಐಟಿ ದೆಹಲಿ, ಐಐಟಿ ಖರಗ್‌ಪುರ ಮತ್ತು ಐಐಎಂ ಕೊಲ್ಕತ್ತಾದಂತಹ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಡೇಟಾ ಸೈನ್ಸ್ ನಲ್ಲಿ ಕೋರ್ಸ್ ನಡೆಸುತ್ತವೆ.
ಆರಂಭಿಕ ವೇತನ 9.5 ಲಕ್ಷದವರೆಗಿದ್ದು, 5 ವರ್ಷ ಅನುಭವ ಹೊಂದಿರುವವರು 60 ಲಕ್ಷದವರೆಗೆ ಸಂಬಳ ಪಡೆಯುತ್ತಾರೆ.
ಬ್ಲಾಕ್‌ಚೈನ್ ಡೆವಲಪರ್ : ಭಾರತದಲ್ಲಿ ನಿಧಾನವಾಗಿ ಇದ್ರ ಬೇಡಿಕೆ ಹೆಚ್ಚಾಗ್ತಿದೆ. ಟೆಕ್ ಆಸಕ್ತರಿಗೆ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.
ಎಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಕಂಪ್ಯೂಟರ್ ಸೈನ್ಸ್ ಹಿನ್ನೆಲೆ ಹೊಂದಿರುವವರು ಮತ್ತು ಕೋಡಿಂಗ್, ಗಣಿತ, ಸಿ ++, ಜಾವಾ ಪ್ರೋಗ್ರಾಮಿಂಗ್ ಭಾಷೆಗಳ ಬಗ್ಗೆ ಉತ್ತಮ ಜ್ಞಾನ ಹೊಂದಿರುವವರು ಈ ಉದ್ಯೋಗ ಪಡೆಯಬಹುದು.
ಈ ಉದ್ಯೋಗದಲ್ಲಿ ವಾರ್ಷಿಕ ಸರಾಸರಿ ವೇತನ 8 ಲಕ್ಷಕ್ಕಿಂತ ಹೆಚ್ಚಿದೆ. ಅನುಭವ ಹೊಂದಿರುವವರಿಗೆ ವಾರ್ಷಿಕ 45 ಲಕ್ಷ ರೂಪಾಯಿಯವರೆಗೆ ಸಂಬಳ ಸಿಗುತ್ತದೆ.