ಸಾಕು ಪ್ರಾಣಿಗಳು ಮಾನವನ ಜೊತೆಗೆ ತುಂಬಾ ಪ್ರೀತಿಯಿಂದ ಇರುತ್ತವೆ. ಹಾಗಂತ ಎಲ್ಲವೂ ಮಾನವನೊಂದಿಗೆ ಆರಾಮವಾಗಿ, ಸೌಮ್ಯವಾಗಿರುತ್ತವೆ ಎಂದರ್ಥವಲ್ಲ. ಈ ಪೈಕಿ ಕೆಲವು ಪ್ರಾಣಿಗಳು ಕೋಪ ಬಂದರೆ ತನ್ನ ಮಾಲೀಕನ ಮೇಲೆಯೇ ದಾಳಿ ಮಾಡುತ್ತವೆ. ಮಾನವ ಪದೇಪದೆ ತೊಂದರೆ ಕೊಟ್ಟರೆ ಸಿಟ್ಟು ಬಂದು ಏನು ಬೇಕಾದರೂ ಮಾಡುತ್ತವೆ ಎಂಬುದಕ್ಕೆ ಹಲವಾರು ನಿದರ್ಶನಗಳು ಇವೆ.
ಈ ಸಿಟ್ಟು ಮಾಡಿಕೊಳ್ಳುವ ಪ್ರಾಣಿಗಳ ಪಟ್ಟಿಗೆ ಪ್ರಾಣಿ ಸಂಗ್ರಹಾಲಯದ ಆನೆಯೊಂದು ಇತ್ತೀಚೆಗೆ ಸೇರಿಕೊಂಡಿದೆ. ಈ ಆನೆಯ ವಿಶೇಷತೆಯೆಂದರೆ, ಜನರು ಅದರ ಸೊಂಡಿಲನ್ನು ಮುಟ್ಟಿದರೂ, ಅದರೊಂದಿಗೆ ವಿನೋದದಿಂದ ಕೀಟಲೆ ಮಾಡಿದರೂ ಸುಮ್ಮನಿರುತ್ತದೆ. ಆದರೆ, ಫೋಟೋ ಏನಾದರೂ ತೆಗೆಯಲು ಹೋದರೆ ತೊಂದರೆ ಕಟ್ಟಿಟ್ಟ ಬುತ್ತಿ. ಯುವತಿಯೊಬ್ಬಳು ಇದರ ಫೋಟೋ ತೆಗೆಯಲು ಮುಂದಾದಾಗ ಸೊಂಡಿಲಿನಿಂದ ಬಾರಿಸಿದ ಈ ಆನೆ ಆಕೆಯನ್ನು ಕೆಳಗೆ ಬೀಳಿಸಿದೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಝೂಗೆ ಬರುವ ಅನೇಕ ವಿದೇಶಿ ಪ್ರವಾಸಿಗರು ಆನೆಯ ಹತ್ತಿರಕ್ಕೆ ಹೋಗಿ ಅದರ ಸೊಂಡಿಲನ್ನು ಮುಟ್ಟಿ ಆನಂದಪಡುತ್ತಿದ್ದರೆ, ಮತ್ತೆ ಕೆಲವರು ಅದರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ತನ್ನೊಂದಿಗೆ ಜನರು ಆಟ ಆಡುವಾಗ ಸುಮ್ಮನಿದ್ದ ಈ ಆನೆ, ತನ್ನ ಫೋಟೋವನ್ನು ಕ್ಲಿಕ್ಕಿಸುವಾಗ ರೊಚ್ಚಿಗೆದ್ದು ಆಕೆಯನ್ನು ಸೊಂಡಿಲಿನಿಂದ ಒದ್ದು ಕೆಳಗೆ ಬೀಳಿಸಿದೆ.
ಅಲ್ಲಿಯೇ ಇದ್ದ ಜನರು ಆ ಬಾಲಕಿಯನ್ನು ಮೇಲಕ್ಕೆತ್ತಲು ಯತ್ನಿಸುತ್ತಿದ್ದರೆ, ಆನೆ ಮಾತ್ರ ಫೋಟೋ ತೆಗೆಯುತ್ತಿದ್ದ ಆಕೆಯ ಮೊಬೈಲ್ ಫೋನನ್ನು ತುಳಿಯಲು ಯತ್ನ ನಡೆಸಿದೆ. ಆಗ ಈ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿ ಯುವತಿಯ ಫೋನನ್ನು ತೆಗೆದುಕೊಂಡನು.