ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾರು ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕಾರುಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಗಡ್ಕರಿ ಹಾಜರಿರುತ್ತಾರೆ. ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು ಅನೇಕ ಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಇದಲ್ಲದೇ ಜೈವಿಕ ಇಂಧನದಲ್ಲಿ ಚಲಿಸುವ ಕಾರುಗಳತ್ತಲೂ ಗಮನ ಹರಿಸುತ್ತಿದ್ದಾರೆ. ನಿತಿನ್ ಗಡ್ಕರಿ ಅವರ ಬಳಿ ಯಾವ ಕಾರಿದೆ ಅನ್ನೋ ಕುತೂಹಲ ಸಹಜ. ಅವರ ಬಳಿ ಮರ್ಸಿಡಿಸ್ ಅಥವಾ ಸ್ಕಾರ್ಪಿಯೊದಂತಹ ಕಾರುಗಳು ಇರಬಹುದು, ಆದರೆ ಅವರು ಸದಾ ಪ್ರಯಾಣ ಮಾಡುವುದು ಟೊಯೋಟಾ ಕಾರಿನಲ್ಲಿ.
ನಿತಿನ್ ಗಡ್ಕರಿ ಟೊಯೊಟಾ ಮಿರಾಯ್ ಸೆಡಾನ್ ಬಳಸುತ್ತಾರೆ. ವಿಶೇಷವೆಂದರೆ ಇದು ಹೈಡ್ರೋಜನ್ ಚಾಲಿತ ಕಾರು. ಟೊಯೊಟಾ ಕಳೆದ ವರ್ಷ ಇದನ್ನು ಡೆಮೊ ಕಾರ್ ಆಗಿ ಪರಿಚಯಿಸಿದೆ, ಗಡ್ಕರಿ ಈ ಕಾರನ್ನು ಟೆಸ್ಟಿಂಗ್ ರೂಪದಲ್ಲಿ ಪಡೆದುಕೊಂಡಿದ್ದಾರೆ. ಈ ಕಾರಿನ ಬೆಲೆ ಕೇಳಿದರೆ ಅಚ್ಚರಿಯಾಗೋದು ಖಚಿತ. ಇಂಧನದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎನ್ನುತ್ತಾರೆ ನಿತಿನ್ ಗಡ್ಕರಿ. ಅದಕ್ಕಾಗಿಯೇ ಹೈಡ್ರೋಜನ್ ಕಾರುಗಳತ್ತ ಒಲವು ಹೊಂದಿದ್ದಾರೆ. ಈ ಹೈಡ್ರೋಜನ್ ಕಾರಿನಲ್ಲಿ ಪ್ರಯಾಣಿಸಲು ಪ್ರತಿ ಕಿಮೀಗೆ 1 ರಿಂದ 2 ರೂಪಾಯಿ ಖರ್ಚಾಗುತ್ತದೆ.
ಪ್ರಸ್ತುತ ನಾವು 8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.ಹಾಗಾಗಿ ಸ್ವಾವಲಂಬಿಯಾಗಬೇಕೆಂದರೆ ಭಾರತದಲ್ಲಿ ಹೈಡ್ರೋಜನ್ ಆಧಾರಿತ ಇಂಧನವನ್ನು ಉತ್ಪಾದಿಸಬೇಕು. ಟೊಯೋಟಾ ಮಿರಾಯ್ ಕಾರು, ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೈಡ್ರೋಜನ್ ಟ್ಯಾಂಕ್ ಅನ್ನು ಹೊಂದಿದೆ, ಅದರ ಅನಿಲವು ವಾಹನವನ್ನು ಮುಂದೂಡಲು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸುತ್ತದೆ.
ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಕೂಡ ಇದ್ದು, ಇದು 182 ಪಿಎಸ್ ಪವರ್ ಮತ್ತು 406 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 1.24 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 5.2 ಕೆ.ಜಿ ಸಾಮರ್ಥ್ಯದ ಹೈಡ್ರೋಜನ್ ಟ್ಯಾಂಕ್ ಹೊಂದಿದೆ. ಒಮ್ಮೆ ಟ್ಯಾಂಕ್ ತುಂಬಿದರೆ, ಈ ಕಾರು 646 ಕಿಲೋಮೀಟರ್‌ವರೆಗೆ ಚಲಿಸಬಲ್ಲದು. ಈ ಕಾರಿನ ಬೆಲೆ 60 ಲಕ್ಷದಿಂದ ಪ್ರಾರಂಭವಾಗಬಹುದು ಅನ್ನೋ ನಿರೀಕ್ಷೆಯಿದೆ.