ಹಣ ಕಳೆದುಕೊಂಡ ಅಥವಾ ಭಾರೀ ನಷ್ಟ ಅನುಭವಿಸಿದ ಬಹುತೇಕ ಸಂದರ್ಭಗಳಲ್ಲೆಲ್ಲ ಅದಕ್ಕೆ ಕಾರಣ ವಾಸ್ತುದೋಷ ಎನ್ನುತ್ತಾರೆ ಜ್ಯೋತಿಷಿಗಳು. ಯಾಕಂದ್ರೆ ಜೀವನದ ಹೆಚ್ಚಿನ ಸಮಯವನ್ನು ನಾವು ಕಳೆಯೋದು ನಮ್ಮ ಮನೆಯಲ್ಲಿ.
ಮನೆಯ ನಾಲ್ಕು ಗೋಡೆಗಳಲ್ಲಿರುವ ಶಕ್ತಿಯೇ ನಿಮ್ಮ ಅದೃಷ್ಟ ಮತ್ತು ದುರಾದೃಷ್ಟಕ್ಕೆ ಕಾರಣ. ಕೆಲ ವಸ್ತುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದ್ರೆ ಇನ್ನು ಕೆಲವು ಬಡತನ ಮತ್ತು ದುಃಖವನ್ನು ತರುತ್ತವೆ. ಈ ಕೆಳಕಂಡ ವಸ್ತುಗಳು ನಿಮ್ಮ ಮನೆಯಲ್ಲಿವೆಯಾ ಅಂತಾ ಪರಿಶೀಲಿಸಿಕೊಳ್ಳಿ, ಇದ್ದರೆ ಮೊದಲು ಅದನ್ನು ಹೊರಕ್ಕೆಸೆಯಿರಿ, ಇಲ್ಲದೇ ಇದ್ದಲ್ಲಿ ಬಡತನ ನಿಮ್ಮ ಬೆನ್ನು ಬಿಡಲಾರದು.
ಹರಿದ ಅಥವಾ ಹಾಳಾದ ವಾಲೆಟ್ : ನಿಮ್ಮ ಪರ್ಸ್ ಅಥವಾ ವಾಲೆಟ್ ಹರಿದಿದ್ಯಾ? ಹಳೆಯದಾಗಿದ್ಯಾ ಅಂತಾ ಪರಿಶೀಲಿಸಿಕೊಳ್ಳಿ. ನೀವು ಹಣ ಇಡುವ ಜಾಗ ಕೂಡ ಒಳ್ಳೆಯ ಸ್ಥಿತಿಯಲ್ಲಿರಬೇಕು. ತುಕ್ಕು ಹಿಡಿದಿರಬಾರದು, ಮುರಿದು ಹೋಗಿರಬಾರದು. ಲಾಕರ್ ನಲ್ಲಿ ಒಂದು ಲಕ್ಷ್ಮಿಯ ಫೋಟೋ ಹಾಗೂ ಅಶ್ವತ್ಥ ಎಲೆಯ ಮೇಲೆ ಬೆಳ್ಳಿ ನಾಣ್ಯವನ್ನಿಡುವುದರಿಂದ ಶುಭವಾಗುತ್ತದೆ.
ಮುರಿದು ಹೋದ ಎಲೆಕ್ಟ್ರಾನಿಕ್ ಉಪಕರಣ : ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಏನಾದ್ರೂ ಇದ್ದರೆ ಅದನ್ನು ಎಸೆದು ಬಿಡಿ. ಯಾಕಂದ್ರೆ ಅದು ರಾಹು ಗ್ರಹದ ಕ್ರೋಧವನ್ನು ಆಕರ್ಷಿಸುತ್ತದೆ.
ಹಳೆಯ ಹರಿದ ಬಟ್ಟೆ : ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಹಳೆಯ ಹಾಗೂ ಹರಿದ ಬಟ್ಟೆಗಳ ಬಂಡಲ್ ಎಲ್ಲೋ ಕಪಾಟಿನ ಮೂಲೆಯಲ್ಲಿ ಇದ್ದೇ ಇರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಅದನ್ನು ಇಟ್ಟುಕೊಳ್ಳುವುದು ಶುಭಕರವಲ್ಲ.
ಜೇಡ ಬಲೆ : ಸಾಮಾನ್ಯವಾಗಿ ಮನೆಯ ಎಲ್ಲಾ ಮೂಲೆಗಳಲ್ಲೂ ಜೇಡ ಬಲೆ ಕಟ್ಟುತ್ತದೆ. ಜೇಡದ ಬಲೆಗಳು ನಿಮ್ಮ ಏಳ್ಗೆಯನ್ನು ಹತೋಟಿಯಲ್ಲಿಡುತ್ತವೆ. ನಿಮ್ಮ ಮನೆಯ ಶಾಂತಿ ಕದಡುತ್ತದೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬದುಕಿನಲ್ಲಿ ತೊಂದರೆ ಉಂಟು ಮಾಡುತ್ತದೆ. ನಿಮ್ಮ ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ವಾರಕ್ಕೊಮ್ಮೆ ಲವಣಯುಕ್ತ ನೀರಿನಿಂದ ಮನೆಯನ್ನು ಶುಚಿಗೊಳಿಸಿ.
ತೆರೆದ ಅಲಮಾರು : ಕಪಾಟು ಅಥವಾ ಅಲಮಾರು ಸದಾ ಮುಚ್ಚಿರಬೇಕು. ಅಲಮಾರು ತೆರೆದಿದ್ದರೆ ಉತ್ಕರ್ಷ ಅಥವಾ ಅಭಿವೃದ್ಧಿ ನಿಮ್ಮ ಮನೆಯಿಂದ ಹೊರಹೋಗುತ್ತದೆ.
ಮುರಿದ ವಿಗ್ರಹ : ಹರಿದು ಹೋದ ದೇವರ ಪಟಗಳು ಹಾಗೂ ಮುರಿದು ಹೋದ ವಿಗ್ರಹಗಳು ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮನೆಯಿಂದ ಹೊರಕ್ಕೆ ಹಾಕಿ.
ಟೆರೇಸ್ ಸ್ವಚ್ಛತೆ : ಯಾವಾಗಲು ಮನೆಯ ಛಾವಣಿ ಅಥವಾ ಟೆರೇಸ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಬೇಡದ ವಸ್ತುಗಳನ್ನೆಲ್ಲ ಅಲ್ಲಿಟ್ಟು ಕಸದ ತೊಟ್ಟಿಯಂತೆ ಮಾಡಬೇಡಿ.
ಫೋಟೋ ಹಾಕುವ ಮುನ್ನ : ಸಾಮಾನ್ಯವಾಗಿ ಎಲ್ಲರಿಗೂ ಗೋಡೆಗಳ ಮೇಲೆ ಸುಂದರ ಫೋಟೋಗಳನ್ನು ಹಾಕುವ ಅಭ್ಯಾಸವಿರುತ್ತೆ. ತಾಜ್ ಮಹಲ್, ನಟರಾಜ ವಿಗ್ರಹ, ಮಹಾಭಾರತದ ಫೋಟೋ, ಮುಳುಗುತ್ತಿರುವ ಹಡಗು ಮತ್ತು ಜಲಪಾತದ ಫೋಟೋಗಳನ್ನು ಹಾಕಬೇಡಿ. ಯಾಕಂದ್ರೆ ಅವು ದುರಾದೃಷ್ಟವನ್ನು ಆಕರ್ಷಿಸುತ್ತವೆ.
ಮುರಿದ ವಸ್ತುಗಳು : ಮುರಿದ ಕುರ್ಚಿ, ಟೇಬಲ್, ಕಬೋರ್ಡ್, ಬೆಡ್ ಏನಾದ್ರೂ ಮನೆಯಲ್ಲಿದ್ರೆ ಅದನ್ನು ಮೊದಲು ಹೊರಗೆಸೆಯಿರಿ. ಯಾಕಂದ್ರೆ ಅವು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ವರ್ಧಿಸುತ್ತವೆ. ಅದರಿಂದ ನಿಮಗೆ ಹಣಕಾಸಿನ ಅಡಚಣೆ ಕಾಣಿಸಿಕೊಳ್ಳುತ್ತದೆ.