ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈಶ್ವರಪ್ಪ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ನಿನ್ನೆ ಮಧ್ಯಾಹ್ನದವರೆಗೂ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿದ್ದ ಕೆ.ಎಸ್. ಈಶ್ವರಪ್ಪ, ಸಂಜೆ ವೇಳೆಗೆ ವರಸೆ ಬದಲಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಈಶ್ವರಪ್ಪ ರಾಜೀನಾಮೆ ತೀರ್ಮಾನ ಬದಲಾಗಲು ದೆಹಲಿಯಿಂದ ಬಂದ ಒಂದು ಕರೆ ಕಾರಣವಾಯಿತೆಂದು ಹೇಳಲಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಳಿಕ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ಹೈಕಮಾಂಡ್, ಅಂತಿಮವಾಗಿ ಈಶ್ವರಪ್ಪರಿಂದ ರಾಜೀನಾಮೆ ಪಡೆಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿತೆಂದು ಹೇಳಲಾಗಿದೆ.
ಹೀಗಾಗಿ ಹೈಕಮಾಂಡ್ ನಾಯಕರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಈಶ್ವರಪ್ಪರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವಂತೆ ಸೂಚಿಸಲಾಯಿತೆಂದು ತಿಳಿದುಬಂದಿದೆ. ಈ ಕರೆ ಬಳಿಕ ಶಿವಮೊಗ್ಗದಲ್ಲಿದ್ದ ಈಶ್ವರಪ್ಪರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೈಕಮಾಂಡ್ ತೀರ್ಮಾನವನ್ನು ತಿಳಿಸಿದ್ದು, ಆ ಬಳಿಕವೇ ಈಶ್ವರಪ್ಪ ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.