ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಅಕಸ್ಮಾತ್ ಅದು ಸಾಧ್ಯವಾಗದಿದ್ದರೆ ಅವರ ಮಗ ಕೆ. ಈ. ಕಾಂತೇಶ್ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ನಗರದ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಕುರುಬ, ಬಲಿಜ ಸಮಾಜದ ಮುಖಂಡರು ಇಂದು ಬಿಜೆಪಿ ಹೈಕಮಾಂಡ್ಗೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ, ಕದಳಿ ವನಿತಾ ಸಮಾಜ, ಜಿಲ್ಲಾ ಕುರುಬರ ಸಂಘ, ಬಲಿಜ ಸಮಾಜದ ಮುಖಂಡರು, ಕನಕ ಮಹಿಳಾ ಸಂಘ, ಜಿಲ್ಲಾ ಜಂಗಮ ಮಹಿಳಾ ಸಮಾಜಗಳ ಪದಾಧಿಕಾರಿಗಳು, ಮುಖಂಡರು ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಒಂದು ಪಕ್ಷ ಅದಾಗದಿದ್ದರೆ ಕೆ.ಈ. ಕಾಂತೇಶ್ರವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಲ್ಲಾ ಸಂಘಟನೆಯ ಪ್ರಮುಖರು ಕೂಡ ಈಶ್ವರಪ್ಪನವರಿಗೆ ಟಿಕೆಟ್ ನೀಡದೆ ಇರುವುದನ್ನು ಬಲವಾಗಿ ವಿರೋಧಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಯಾವ ಮಾನದಂಡದ ಮೇಲೆ ಟಿಕೆಟ್ ನೀಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ವಯಸ್ಸಾಗಿದೆ ಎಂದರೆ ಈಗಾಗಲೇ ವಯಸ್ಸಾದ ಅನೇಕರಿಗೆ ಟಿಕೆಟ್ ನೀಡಲಾಗಿದೆ. ಕುಟುಂಬ ರಾಜಕಾರಣ ಎಂಬ ಮಾನದಂಡ ನೋಡಿದರೆ ಅದೂ ಅಲ್ಲ. ಅನೇಕರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ. ಹೀಗಿರುವಾಗ ಈಶ್ವರಪ್ಪನವರಿಗೆ ಏಕೆ ಟಿಕೆಟ್ ನೀಡಿಲ್ಲ. ಅವರಿಗೇ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಅವರ ಮಗನಿಗೆ ನೀಡಬೇಕು ಎಂದು ಬಿಜೆಪಿಯ ವರಿಷ್ಠರಿಗೆ ಮನವಿ ಮಾಡಿದರು.