ಕೆಲವೊಂದು ನಿರ್ದಿಷ್ಟ ಹಣ್ಣಿನ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವು ತರಕಾರಿಗಳ ಸಿಪ್ಪೆಗಳು ಸಹ ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ಅದರಲ್ಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಅಡುಗೆಗೆ ಬಳಸುತ್ತೇವೆ.
ಕೆಲವರು ಈರುಳ್ಳಿಯನ್ನು ಸಲಾಡ್‌ನಂತೆ ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಬೇಸಿಗೆಯಲ್ಲಿ ಶಾಖದಿಂದ ರಕ್ಷಿಸುವಲ್ಲಿ ಈರುಳ್ಳಿ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆದ್ರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸಿ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದ್ರೆ ಈ ಸಿಪ್ಪೆಗಳಿಂದ ಏನೇನು ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.
ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಎಸೆಯದೇ ಗೊಬ್ಬರವಾಗಿ ಬಳಸಬಹುದು. ಈ ಸಿಪ್ಪೆಯಿಂದ ತಯಾರಿಸಿದ ಗೊಬ್ಬರ ಸಸ್ಯಗಳಿಗೆ ತುಂಬಾ ಒಳ್ಳೆಯದು. ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ತಾಮ್ರ ಸಮೃದ್ಧವಾಗಿದೆ.
ಈರುಳ್ಳಿ ಸಿಪ್ಪೆಗಳು ಕೂದಲಿಗೆ ಹೊಳಪು ನೀಡುತ್ತವೆ. ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ಅದರಿಂದ ತಲೆ ತೊಳೆದರೆ ಕೂದಲಿಗೆ ಸಾಕಷ್ಟು ಹೊಳಪು ಬರುತ್ತದೆ. ತಲೆಯ ಕೂದಲಿಗೆ ಬಣ್ಣ ಮಾಡಲು ಸಹ ಇದನ್ನು ಬಳಸಲಾಗುತ್ತದೆ. ಈರುಳ್ಳಿ ಸಿಪ್ಪೆಯನ್ನು ಅರ್ಧ ಘಂಟೆಯವರೆಗೆ ನೀರಿನಲ್ಲಿ ಕುದಿಸಿ. ನಂತರ ಆ ನೀರಿನಿಂದ ತಲೆಗೆ ಮಸಾಜ್ ಮಾಡಿ ನಂತರ ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದು ಕೂದಲಿಗೆ ನೈಸರ್ಗಿಕ ಬಣ್ಣವಾಗಿ ಕಾರ್ಯ ನಿರ್ವಹಿಸುತ್ತದೆ.
ಕೆಲವೊಮ್ಮೆ ದೇಹದ ಸ್ನಾಯುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈರುಳ್ಳಿ ಸಿಪ್ಪೆಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಸಿ. ರಾತ್ರಿ ಮಲಗುವ ಮುನ್ನ ಈ ನೀರನ್ನು ಕುಡಿಯಿರಿ. ಇದು ಸ್ನಾಯು ಸೆಳೆತಕ್ಕೆ ಪರಿಹಾರ ನೀಡುತ್ತದೆ.
ಚರ್ಮಗಳಲ್ಲಿ ತುರಿಕೆಯ ಸಮಸ್ಯೆ ಇದ್ದರೆ ಅದಕ್ಕೆ ಸಹ ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆಯಿಂದ ಪರಿಹಾರ ಸಿಗುತ್ತದೆ. ನೀರಿನಲ್ಲಿ ನೆನೆಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯನ್ನು ತುರಿಕೆ ಇರುವ ಜಾಗದಲ್ಲಿ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ತುರಿಕೆ ಮಾಯವಾಗುತ್ತದೆ.