ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಈರುಳ್ಳಿ ದುಬಾರಿಯಾಗ್ತಿದ್ದಂತೆ ಅದನ್ನು ಲೂಟಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸುಮಾರು 60 ಗೋಣಿ ಚೀಲಗಳಲ್ಲಿ ಈರುಳ್ಳಿಯನ್ನು ಕದ್ದೊಯ್ದ ಆರೋಪದ ಮೇಲೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಕರ್ನಲ್‌ಗಂಜ್ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದು, ಆತನನ್ನು ಕೃಷ್ಣ ಕುಮಾರ್ ಪಾಲ್ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಆರೋಪಿ ಸೋನು ಅಲಹಾಬಾದ್ ವಿಶ್ವವಿದ್ಯಾನಿಲಯದ ಹಾಲೆಂಡ್ ಹಾಲ್ ಹಾಸ್ಟೆಲ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ. ಪೊಲೀಸರಿಗೆ ಸಿಕ್ಕಿಬಿದ್ದ ನಂತರ ತಾನು ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದಾನೆ.
ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್ 30 ರಂದು ಸಂದೀಪ್ ಕುಮಾರ್ ಎಂಬಾತ ಈರುಳ್ಳಿ ಸಾಗಿಸುತ್ತಿದ್ದರು. ತಮ್ಮ ಸಹೋದ್ಯೋಗಿ ಪ್ರಿಯಾಂಶು ಕುಶ್ವಾಹಾ ಅವರೊಂದಿಗೆ ಜಸ್ರಾ ತರಕಾರಿ ಮಾರುಕಟ್ಟೆಯಿಂದ ಪ್ರತಾಪ್‌ಗಢಕ್ಕೆ ಹೋಗುತ್ತಿದ್ದರು. ವ್ಯಾನ್‌ನಲ್ಲಿ ಸುಮಾರು 60 ಚೀಲ ಈರುಳ್ಳಿಯನ್ನ ಕೊಂಡೊಯ್ಯುತ್ತಿದ್ದರು. 34 ಕ್ವಿಂಟಾಲ್‌ನಷ್ಟು ಈರುಳ್ಳಿ ವ್ಯಾನ್‌ನಲ್ಲಿತ್ತು. ಅವರು ವಾರ್ಸಿಟಿ ರಸ್ತೆ ಬಳಿ ಬಂದಾಗ, ಮೂವರು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಒಂದು ಲಕ್ಷ ರೂಪಾಯಿ ಕೊಡುವಂತೆ ಕೇಳಿದ್ದಾರೆ.
ಹಣ ಕೊಡಲು ಸಾಧ್ಯವಿಲ್ಲ ಎಂದಾಗ ದುಷ್ಕರ್ಮಿಗಳು ಇಬ್ಬರನ್ನೂ ಬಲವಂತವಾಗಿ ತಮ್ಮ ಕಾರಿನಲ್ಲಿ ಕರೆದೊಯ್ದು ಹಾಲೆಂಡ್ ಹಾಲ್ ಹಾಸ್ಟೆಲ್‌ನಲ್ಲಿ ಹಲವು ಗಂಟೆಗಳ ಕಾಲ ಬಂಧಿಯಾಗಿಟ್ಟಿದ್ದಾರೆ. ದುಷ್ಕರ್ಮಿಗಳೇ ಈರುಳ್ಳಿ ತುಂಬಿದ್ದ ಪಿಕ್ ಅಪ್ ವ್ಯಾನ್ ಅನ್ನು ಹತ್ತಿರದ ತರಕಾರಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಇಳಿಸಿದ್ದಾರೆ. ನಂತರ ಹಾಸ್ಟೆಲ್‌ಗೆ ಹಿಂತಿರುಗಿ ಪಿಕಪ್ ವ್ಯಾನ್ ಕೀಗಳನ್ನು ವಾಪಸ್ ಕೊಟ್ಟಿದ್ದಾರೆ.
ಸುಮಾರು 11,500 ರೂಪಾಯಿ ನಗದನ್ನು ಸಹ ದುಷ್ಕರ್ಮಿಗಳು ದೋಚಿದ್ದಾರೆಂದು ಸಂದೀಪ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಣ ಕೊಟ್ಟ ಬಳಿಕ ಸಂದೀಪ್ ಮತ್ತವರ ಸಹೋದ್ಯೋಗಿಯನ್ನು ಬಂಧಮುಕ್ತ ಮಾಡಿದ್ದಾರಂತೆ. ಸಂದೀಪ್ ಕುಮಾರ್ ನೀಡಿದ ದೂರಿನ ಅನ್ವಯ ತನಿಖೆ ಮಾಡಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.