ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಆಳವಾಗುತ್ತಿದೆ. ಈ ಪ್ರಕರಣದಲ್ಲಿ ಈಗಾಗಲೇ ಸಚಿವರಾಗಿದ್ದ ಪಾರ್ಥ ಚಟರ್ಜಿ ಹಾಗೂ ಆತನ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಬಂಧಿಸಲಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾರ್ಥ ಚಟರ್ಜಿಯನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ.
ಪಾರ್ಥ ಚಟರ್ಜಿ ತನ್ನ ಅಪ್ತೆ ಅರ್ಪಿತಾ ಮುಖರ್ಜಿ ಮನೆಯನ್ನು ಮಿನಿ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿದ್ದು, ತಾನು ಗಳಿಸಿದ ಅಕ್ರಮ ಸಂಪತ್ತನ್ನು ಇಲ್ಲಿಯೇ ಸಂಗ್ರಹಿಸಿಡುತ್ತಿದ್ದರು ಎನ್ನಲಾಗಿದೆ. ಈ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅರ್ಪಿತಾ ಮುಖರ್ಜಿಯ ಒಂದು ಮನೆ ಮೇಲೆ ದಾಳಿ ಮಾಡಿದ ವೇಳೆ 20 ಕೋಟಿ ರೂಪಾಯಿಗಳ ನಗದು ಸಿಕ್ಕಿತ್ತು.
ಬುಧವಾರದಂದು ಆಕೆಯ ಮತ್ತೊಂದು ಮನೆಯ ಮೇಲೆ ದಾಳಿ ಮಾಡಿದ ವೇಳೆ 30 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಪತ್ತೆಯಾಗಿದೆ. ಮತ್ತೊಂದು ಸ್ವಾರಸ್ಯಕರ ಸಂಗತಿ ಎಂದರೆ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮನೆಯಲ್ಲಿ ನೋಟಿಸ್ ಒಂದು ಸಿಕ್ಕಿದ್ದು, ಅರ್ಪಿತಾ ಮುಖರ್ಜಿ ತಾನು ವಾಸವಿದ್ದ ಫ್ಲಾಟ್ ನ ನಿರ್ವಹಣಾ ಶುಲ್ಕವಾದ 11,819 ರೂಪಾಯಿಗಳನ್ನು ಪಾವತಿಸಿರಲಿಲ್ಲ ಎಂದು ಹೇಳಲಾಗಿದೆ.