ರಾಣಿ ಎಲಿಜಬೆತ್ II ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಎಲಿಜಬೆತ್ ನಿನ್ನೆ ಬಕಿಂಗ್‌ಹ್ಯಾಮ್ ಅರಮನೆಯ ಸ್ಕಾಟ್ಲೆಂಡ್‌ನ ಬೇಸಿಗೆ ನಿವಾಸ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು. ಎಲಿಜಬೆತ್ ಮರಣದ ನಂತರ ಹಿರಿಯ ಮಗ ಚಾರ್ಲ್ಸ್, ಬ್ರಿಟಿಷ್ ಸಿಂಹಾಸನ ಏರಿದ್ದಾರೆ.
ರಾಣಿ ಎಲಿಜಬೆತ್ II, 70 ವರ್ಷಗಳ ಕಾಲ ಸಿಂಹಾಸನವನ್ನ ಅಲಂಕರಿಸಿದ್ದರು. ಮೂಲಗಳ ಪ್ರಕಾರ ಅವರು ಒಟ್ಟಾರೆ 500 ಮಿಲಿಯನ್ ಡಾಲರ್ ಆಸ್ತಿಯನ್ನು ಬಿಟ್ಟು ಹೋಗಿದ್ದಾರಂತೆ. ಚಾರ್ಲ್ಸ್ ರಾಜನಾಗಿ ಪಟ್ಟಾಭಿಷೇಕಗೊಂಡ ನಂತರ ಸಿಂಹಾಸನದ ಜೊತೆಗೆ ಎಲಿಜಬೆತ್‌ಗೆ ಸೇರಿದ್ದ ಖಾಸಗಿ ಸಂಪತ್ತನ್ನು ಸಹ ಪಡೆದುಕೊಳ್ಳುತ್ತಾರೆ.
ರಾಣಿ ಎಲಿಜಬೆತ್ IIಗೆ ಸೇರಿರುವ ಆಸ್ತಿಯ ನಿವ್ವಳ ಮೌಲ್ಯವನ್ನು ನಿಖರವಾಗಿ ಅಳೆಯುವುದು ಕಷ್ಟಕರ. ಏಕೆಂದರೆ ಕೆಲವು ಸ್ವತ್ತುಗಳು ಖಾಸಗಿಯಾಗಿವೆ ಮತ್ತು ಇನ್ನು ಕೆಲವು ಕ್ರೌನ್ ಎಸ್ಟೇಟ್‌ನ ಭಾಗವಾಗಿದೆ. ಅದನ್ನು ನೇರವಾಗಿ ರಾಜ ನಿಯಂತ್ರಿಸಲಾಗುವುದಿಲ್ಲ. 2017ರಲ್ಲಿ ರಾಣಿಯ ಆದಾಯ ಸುಮಾರು 472 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಈ ವಿಶ್ಲೇಷಣೆಯು ಕ್ರೌನ್ ಎಸ್ಟೇಟ್‌ನ ಏರುತ್ತಿರುವ ಮೌಲ್ಯವನ್ನು ಒಳಗೊಂಡಿಲ್ಲ. ಎಲಿಜಬೆತ್ ಮಾಡಿದ್ದ ಹೂಡಿಕೆಗಳು, ಕಲಾತ್ಮಕ ವಸ್ತುಗಳು, ಆಭರಣಗಳು ಮತ್ತು ರಿಯಲ್ ಎಸ್ಟೇಟ್ ಆಸ್ತಿ ಇವನ್ನೆಲ್ಲ ಅಳೆದರೆ ಆಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಾಗಬಹುದು. 1990ರ ದಶಕದಲ್ಲಿ ಆಸ್ತಿ ವಿವಾಸ, ರಾಜಮನೆತನದವರ ವೆಚ್ಚದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ 1992 ರಲ್ಲಿ ರಾಣಿ ತನ್ನ ಕುಟುಂಬದ ಹೆಚ್ಚಿನ ವೆಚ್ಚವನ್ನು ಪಾವತಿಸಲು ಒಪ್ಪಿಕೊಂಡಿದ್ದರು. 1930ರ ನಂತರ ಆದಾಯ ತೆರಿಗೆಯನ್ನು ಪಾವತಿಸಿದ ಮೊದಲ ಕ್ವೀನ್ ಎನಿಸಿಕೊಂಡಿದ್ದರು.
ರಾಣಿಯ ವಾರಾಂತ್ಯದ ನಿವಾಸ ವಿಂಡ್ಸರ್ ಕ್ಯಾಸಲ್ 1992ರಲ್ಲಿ ಬೆಂಕಿಯಿಂದ ನಾಶವಾದಾಗ, ಸಾರ್ವಜನಿಕರು ದುರಸ್ತಿಗಾಗಿ ಲಕ್ಷಾಂತರ ಪೌಂಡ್‌ಗಳನ್ನು ಪಾವತಿಸುವುದರ ವಿರುದ್ಧ ಬಂಡಾಯವೆದ್ದರು. ಆದರೆ ಆಕೆ ವೈಯಕ್ತಿಕ ಆದಾಯದ ಮೇಲೆ ತೆರಿಗೆ ಪಾವತಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು. ಕ್ಯಾಸಲ್ ಮರುನಿರ್ಮಾಣದ ಶೇ.70ರಷ್ಟು ವೆಚ್ಚ ಪಾವತಿಗೆ ಸಮ್ಮತಿಸಿದ್ದರು.
ರಾಣಿ ಎಲಿಜಬೆತ್ IIರ ಅಧಿಕೃತ ಕರ್ತವ್ಯಗಳು, ಪ್ರಯಾಣ, ರಾಜಮನೆತನದ ಸಿಬ್ಬಂದಿ ಮತ್ತು ಅರಮನೆಗಳ ನಿರ್ವಹಣೆಯಂತಹ ಇತರ ವೆಚ್ಚಗಳನ್ನು ಬೆಂಬಲಿಸಲು ಸಾರ್ವಜನಿಕ ನಿಧಿಯೂ ಇದೆ. ಈ ಅನುದಾನದ ಮೊತ್ತ 2021-22 ರಲ್ಲಿ 86.3 ಮಿಲಿಯನ್ ಪೌಂಡ್‌ಗಳಷ್ಟಿತ್ತು. ಅರಮನೆಗೆ ಪ್ರವಾಸಿಗರು ಭೇಟಿ ನೀಡುವುದರಿಂದ ಅದರಿಂದಲೂ ರಾಜಮನೆತನಕ್ಕೆ ಆದಾಯವಿದೆ.
ಕ್ರೌನ್ ಎಸ್ಟೇಟ್: 19.5 ಬಿಲಿಯನ್ ಡಾಲರ್
ಸ್ಕಾಟ್ಲೆಂಡ್‌ನ ಕ್ರೌನ್ ಎಸ್ಟೇಟ್: 592 ಮಿಲಿಯನ್ ಡಾಲರ್
ಬಕಿಂಗ್‌ಹ್ಯಾಮ್ ಅರಮನೆ: 4.9 ಬಿಲಿಯನ್ ಡಾಲರ್
ದಿ ಡಚಿ ಆಫ್ ಕಾರ್ನ್‌ವಾಲ್: 1.3 ಬಿಲಿಯನ್ ಡಾಲರ್
ದಿ ಡಚಿ ಆಫ್ ಲ್ಯಾಂಕಾಸ್ಟರ್: 748 ಮಿಲಿಯನ್ ಡಾಲರ್
ಕೆನ್ಸಿಂಗ್ಟನ್ ಅರಮನೆ: 630 ಮಿಲಿಯನ್ ಡಾಲರ್
ಹೀಗೆ ಸುಮಾರು 28 ಶತಕೋಟಿ ಡಾಲರ್ ಸಾಮ್ರಾಜ್ಯಕ್ಕೆ ಚಾರ್ಲ್ಸ್ ನೇರವಾಗಿ ಉತ್ತರಾಧಿಕಾರಿಯಾಗುವುದಿಲ್ಲ. ರಾಣಿ ಎಲಿಜಬೆತ್ IIರ ವೈಯಕ್ತಿಕ ಆಸ್ತಿಯನ್ನು ಮಾತ್ರ ಪಡೆಯುತ್ತಾರೆ.