ಐಸ್ ಕ್ರೀಮ್ ಯಾರಿಗೆ ಇಷ್ಟವಿಲ್ಲ ಹೇಳಿ? ಬೇಸಿಗೆಯ ದಿನಗಳಲ್ಲಿ ತಣ್ಣನೆಯ ಐಸ್ ಕ್ರೀಂನ ಮಜವೇ ಬೇರೆ. ಆದರೆ ದಿನದ ಕೊನೆಯಲ್ಲಿ ಐಸ್ ಕ್ರೀಮ್ ತಿನ್ನುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಐಸ್ ಕ್ರೀಮ್ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಆದ್ದರಿಂದ ಪ್ರತಿದಿನ ರಾತ್ರಿ ಊಟದ ನಂತರ ಐಸ್ ಕ್ರೀಮ್ ಅನ್ನು ಸೇವಿಸಿದರೆ ಅದು ಕ್ಯಾಲೊರಿಗಳನ್ನು ಹೆಚ್ಚಿಸಬಹುದು, ಇದು ಬೊಜ್ಜಿಗೂ ಕಾರಣವಾಗುತ್ತದೆ.
ದಂತಕ್ಷಯ: ಐಸ್ ಕ್ರೀಂನಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಇದು ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ ಮತ್ತು ಹಲ್ಲು ಕೊಳೆಯಲು ಕಾರಣವಾಗುತ್ತದೆ. ರಾತ್ರಿ ಮಲಗುವ ಮುನ್ನ ಐಸ್ ಕ್ರೀಂ ತಿಂದರೆ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಏಕೆಂದರೆ ರಾತ್ರಿ ಸಮಯದಲ್ಲಿ ಲಾಲಾರಸದ ಉತ್ಪತ್ತಿ ಕಡಿಮೆಯಾಗಿ ಹಲ್ಲುಗಳು ಸ್ವಚ್ಛವಾಗುವುದಿಲ್ಲ.
ಸಕ್ಕರೆ ಹೆಚ್ಚಳ: ರಾತ್ರಿ ಐಸ್ ಕ್ರೀಮ್ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮಧುಮೇಹ ರೋಗಿಗಳಿಗೆ ಅಪಾಯಕಾರಿ. ಜೀರ್ಣಕ್ರಿಯೆಗೆ ಸಮಸ್ಯೆ: ರಾತ್ರಿ ಊಟದ ನಂತರ ಐಸ್ ಕ್ರೀಂ ತಿನ್ನುವುದರಿಂದ ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ವಿಶೇಷವಾಗಿ ದುರ್ಬಲ ಜೀರ್ಣಕ್ರಿಯೆ ಇರುವವರು ರಾತ್ರಿ ಐಸ್‌ಕ್ರೀಂ ತಿನ್ನಬಾರದು.
ಹೃದಯರೋಗ: ಐಸ್ ಕ್ರೀಂನಲ್ಲಿ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಐಸ್ ಕ್ರೀಮ್ ತಿನ್ನುತ್ತಿದ್ದರೆ ಅದು ಹೃದಯಕ್ಕೆ ಹಾನಿ ಮಾಡುತ್ತದೆ. ನಾವು ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಐಸ್ ಕ್ರೀಂನಂತಹ ಸಿಹಿತಿಂಡಿಗಳ ಸೇವನೆಯನ್ನು ಮಿತಿಗೊಳಿಸಬೇಕು.
ನಿದ್ರೆಗೆ ತೊಂದರೆ: ಐಸ್ ಕ್ರೀಂನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಸಕ್ಕರೆಯು ಪ್ರಚೋದನೆಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಮತ್ತು ಶಾಂತ ನಿದ್ರೆಯನ್ನು ಪಡೆಯಲು ಬಯಸಿದರೆ, ರಾತ್ರಿ ಊಟದ ನಂತರ ಐಸ್ ಕ್ರೀಮ್ ಸೇವನೆಯನ್ನು ಸೀಮಿತಗೊಳಿಸಬೇಕು.
ಚರ್ಮದ ಸಮಸ್ಯೆಗಳು: ಐಸ್ ಕ್ರೀಮ್ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಐಸ್ ಕ್ರೀಂ ಹೆಚ್ಚು ಸಕ್ಕರೆಯನ್ನು ಹೊಂದಿರುವುದರಿಂದ ಇದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಚರ್ಮದ ಕಿರಿಕಿರಿ ಮತ್ತು ತುರಿಕೆಗೆ ಕಾರಣವಾಗಬಹುದು.
ಆರೋಗ್ಯದ ವಿಚಾರದಲ್ಲಿ ಆಹಾರ ಪದ್ಧತಿ ಮತ್ತು ತಿನ್ನುವ ಸಮಯ ಬಹಳ ಮುಖ್ಯ. ಆದ್ದರಿಂದ ರಾತ್ರಿಯ ಊಟದ ನಂತರ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಿ. ಸಿಹಿ ತಿನ್ನಬೇಕೆನಿಸಿದರೆ ಹಣ್ಣುಗಳನ್ನು ತಿನ್ನುವುದು ಉತ್ತಮ ಆಯ್ಕೆಯಾಗಿದೆ.