ಭಕ್ತ ಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯನ್ನು ಕಾಣಬಹುದು. ವಿಷ್ಣುಮಾಯೆಯಾದ ಶಕ್ತಿ ಮತ್ತು ಶಿವೆಯ ಅಣ್ಣನಾದ ವಿಷ್ಣು ಇಲ್ಲಿ ಒಂದೇ ಕಡೆಯಲ್ಲಿ ಪೂಜೆಗೊಳ್ಳುತ್ತಾರೆ.
ದೇವಾಲಯ ಇರುವ ಈ ಸ್ಥಳವು ಹಿಂದೆ ದೊಡ್ಡ ಮರ -ಗಿಡಗಳಿಂದ ಕೂಡಿದ ಹಾಡಿ ಅಂದರೆ ಕಾಡು (ಪಾಡಿ-ತುಳು) ಆಗಿತ್ತಂತೆ. ಕಾಲಕ್ರಮೇಣ ‘ಅಂಬಲಪಾಡಿ’ ಎಂದು ಕರೆಯಲ್ಪಟ್ಟಿತು ಎಂಬುದು ತಿಳಿದುಬರುತ್ತದೆ. ಇಲ್ಲಿ ಹಿಂದೆ ದೇವಿಯ ಗುಡಿ ಮಾತ್ರ ಇದ್ದು, ಇಲ್ಲಿ ಬಂದು ನೆಲೆಸಿದ ಬಲ್ಲಾಳರ ಕುಟುಂಬದ ಆರಾಧ್ಯ ದೇವರಾದ ಜನಾರ್ಧನನನ್ನು ಇಲ್ಲಿ ಪ್ರತಿಷ್ಠಾಪಿಸಿದರು.
ಅಂದಿನಿಂದ ಇಲ್ಲಿ ಶ್ರೀ ಮಹಾಕಾಳಿ ಮತ್ತು ಶ್ರೀ ಮಹಾವಿಷ್ಣು ಜೊತೆಯಾಗಿ ಪೂಜೆಗೊಳ್ಳುತ್ತಾ ಇದ್ದಾರೆ. ಪ್ರತೀ ಶುಕ್ರವಾರದಂದು ಅಮ್ಮನವರ ದರ್ಶನ ಸೇವೆಯು ನಡೆಯುತ್ತದೆ. ಅಮ್ಮನವರ ದೇವಾಲಯದ ಸುತ್ತಲೂ ನವದುರ್ಗೆಯರ ಮೂರ್ತಿಗಳನ್ನು ಬಹಳ ನಾಜೂಕಾಗಿ ಕೆತ್ತಲಾಗಿದೆ. ಇದು ಉಡುಪಿಯಿಂದ 1.5 ಕಿ.ಮೀ. ದೂರದಲ್ಲಿದೆ.