ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಲೇ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ ಅನೇಕ ಶ್ರೀಮಂತ ವ್ಯಕ್ತಿಗಳು ದೇಶದಲ್ಲಿದ್ದಾರೆ. ಕೇವಲ 130 ರೂಪಾಯಿಯಿಂದ 17,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ ರಾಜೇಂದ್ರ ಗುಪ್ತಾ ಕೂಡ ಅವರಲ್ಲೊಬ್ಬರು. ಇವರನ್ನು ಪಂಜಾಬ್‌ನ ‘ಧೀರೂಭಾಯಿ ಅಂಬಾನಿ’ ಎಂದು ಕರೆಯಲಾಗುತ್ತದೆ. ರಾಜೇಂದ್ರ ಗುಪ್ತಾ ಟ್ರೈಡೆಂಟ್ ಲಿಮಿಟೆಡ್‌ನ ಕಾರ್ಪೊರೇಟ್ ಸಲಹೆಗಾರ ಮತ್ತು ಟ್ರೈಡೆಂಟ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ.
2007 ರಲ್ಲಿ ಉದ್ಯಮ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೆಲಸಕ್ಕಾಗಿ ರಾಷ್ಟ್ರಪತಿಗಳಿಂದ ʼಪದ್ಮಶ್ರೀʼ ಪ್ರಶಸ್ತಿಯನ್ನು ನೀಡಲಾಯಿತು. ಅವರು ಇತ್ತೀಚೆಗೆ ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ, ರಾಜೇಂದ್ರ ಗುಪ್ತಾ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಹಿಮಾಚಲ ಪ್ರದೇಶಗಳಿಗೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಷ್ಟೇ ಅಲ್ಲ ಪಂಜಾಬ್ ಬ್ಯೂರೋ ಆಫ್ ಇನ್ವೆಸ್ಟ್‌ಮೆಂಟ್ ಪ್ರಮೋಷನ್‌ನ ಆಡಳಿತ ಮಂಡಳಿಯಲ್ಲಿ ವ್ಯಾಪಾರ, ಉದ್ಯಮ ಮತ್ತು ವಾಣಿಜ್ಯದ ಪ್ರತಿನಿಧಿಯಾಗಿದ್ದಾರೆ. ರಾಜೇಂದ್ರ ಗುಪ್ತಾ ಅವರು ಸಿಮೆಂಟ್ ಪೈಪ್ ಮತ್ತು ಮೇಣದಬತ್ತಿಗಳನ್ನು ತಯಾರಿಸುವ ಸಣ್ಣ ಉದ್ಯೋಗದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಇವರ ಆದಾಯ ದಿನಕ್ಕೆ 30 ರೂಪಾಯಿ ಮಾತ್ರ. 1985ರಲ್ಲಿ ಅಭಿಷೇಕ್ ಇಂಡಸ್ಟ್ರೀಸ್ ಅನ್ನು ಪ್ರಾರಂಭಿಸಿದರು.
ನಂತರ ಪಾಲುದಾರಿಕೆಯಲ್ಲಿ ನೂಲುವ ಗಿರಣಿ ಸ್ಥಾಪಿಸಿದರು. ಇದಾದ ನಂತರ ಜೀವನದಲ್ಲಿ ಹಿಂತಿರುಗಿ ನೋಡಲಿಲ್ಲ. 1991 ರಲ್ಲಿ ಅವರು ಯಶಸ್ಸಿನ ಹೊಸ ಆಯಾಮಗಳನ್ನು ಸೃಷ್ಟಿಸಿದರು. ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿದರು. ಈಗ ಅವರದ್ದು 17 ಸಾವಿರ ಕೋಟಿ ರೂಪಾಯಿ ವ್ಯವಹಾರ. ಪ್ರಸ್ತುತ ಅವರ ಟ್ರೈಡೆಂಟ್ ಗ್ರೂಪ್ ಕ್ಲೈಂಟ್‌ಗಳಲ್ಲಿ ವಾಲ್‌ಮಾರ್ಟ್, ಜೆಸಿಪೆನ್ನಿ ಸೇರಿದಂತೆ ಅನೇಕ ಹೆಸರಾಂತ ಕಂಪನಿಗಳಿವೆ.
ಆದಾಗ್ಯೂ ಕುಟುಂಬ ಮತ್ತು ಆರೋಗ್ಯದ ಕಾರಣಗಳಿಂದಾಗಿ ರಾಜೇಂದ್ರ ಗುಪ್ತಾ 2022 ರಲ್ಲಿ ಟ್ರೈಡೆಂಟ್‌ನ ನಿರ್ದೇಶಕರ ಮಂಡಳಿಯನ್ನು ತೊರೆದರು. ಆದರೆ ಗ್ರೂಪ್‌ನ ಗೌರವಾನ್ವಿತ ಅಧ್ಯಕ್ಷರಾಗಿದ್ದಾರೆ. ಕಂಪನಿಯ ಪ್ರಧಾನ ಕಚೇರಿಯು ಲುಧಿಯಾನದಲ್ಲಿದೆ.