ಹೋಳಿ ಹಬ್ಬ ಸಮೀಪಿಸುತ್ತಿದೆ. ಯುವ ಜನತೆ ಈ ಹಬ್ಬದಲ್ಲಿ ಸಂಭ್ರಮಿಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಮಧ್ಯೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜೀವಂತ ರತಿ – ಮನ್ಮಥರನ್ನು ನಗಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಾ. 7ರಂದು ಸಂಜೆ 7:30 ರಿಂದ ರಾತ್ರಿ 12 ರ ವರೆಗೆ ರಾಣೇಬೆನ್ನೂರು ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜೀವಂತ ರತಿ – ಮನ್ಮಥರನ್ನು ಕೂರಿಸಲಾಗುತ್ತಿದ್ದು, ಇವರುಗಳನ್ನು ನಗಿಸಿದವರಿಗೆ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ಕಳೆದ 65 ವರ್ಷಗಳಿಂದಲೂ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ನಗದು ಬಹುಮಾನದ ಮೊತ್ತ ಏರಿಕೆಯಾಗುತ್ತಲೆ ಇದೆ. ಆದರೆ ಈವರೆಗೂ ಯಾರಿಂದಲೂ ನಗಿಸಲು ಸಾಧ್ಯವಾಗಿಲ್ಲ ಎಂಬುದು ವಿಶೇಷ ಸಂಗತಿ.
ಕಳೆದ 24 ವರ್ಷದಿಂದ ಮನ್ಮಥನ ವೇಷವನ್ನು ಗದಿಗೆಪ್ಪ ರೊಡ್ಡನವರ ನಿರ್ವಹಿಸುತ್ತಾ ಬಂದಿದ್ದರೆ, 33 ವರ್ಷಗಳಿಂದ ರತಿ ವೇಷವನ್ನು ಕುಮಾರ ಹಡಪದ ನಿರ್ವಹಿಸುತ್ತಿದ್ದಾರೆ. ಆದರೆ ಯಾರಿಗೂ ಇವರನ್ನು ನಗಿಸಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಇದಕ್ಕೆ ಬ್ರೇಕ್ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.