ಈಗಿನ ಕಾಲದ ಬಹುತೇಕ ಯುವತಿಯರಿಗೆ ಅಡುಗೆ ಮಾಡಲು ಬಿಡಿ, ಒಂದು ಟೀ, ಕಾಫಿ ಮಾಡಲು ಕೂಡ ಬರೋದಿಲ್ಲ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಅಡುಗೆ ಮಾಡುವುದು ಹೇಗೆ ಎಂದು ಕಲಿಸುತ್ತಾರೆ. ಯಾಕೆಂದರೆ ಮದುವೆಯಾಗಿ ಗಂಡನ ಮನೆಗೆ ಹೋದಾಗ ಎಡವಟ್ಟಾಗಬಾರದಲ್ವೇ..?
ಆದ್ರೂ ಮೊದ ಮೊದಲಿಗೆ ಅಡುಗೆ ಕಲಿಯಬೇಕಾದ್ರೆ ಇಷ್ಟೆಲ್ಲಾ ಮಾಡ್ಬೇಕಾ ಅಂತಾ ಅಚ್ಚರಿಯಾಗೋದು ಸಹಜ. ಅದ್ರಲ್ಲೂ ಚಪಾತಿ ಮಾಡಬೇಕೆಂದ್ರೆ, ಅಮೆರಿಕಾ, ಆಸ್ಟ್ರೇಲಿಯಾ ಭೂಪಟನೇ ರಚನೆಯಾಗುತ್ತದೆ. ಇನ್ನೂ ಬೇಯಿಸಿದರಂತೂ ಕೇಳೋದೇ ಬೇಡ. ಸುಟ್ಟ ಚಪಾತಿ ಊಟಕ್ಕೆ ಫಿಕ್ಸ್…… ಇದೀಗ ಇಂಥದ್ದೇ ತಮಾಷೆಯ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ದೇಸಿ ತಾಯಿಯೊಬ್ಬರು ಹತಾಶವಾಗಿ ತನ್ನ ಮಗಳಿಗೆ ರೊಟ್ಟಿ ಬೇಯಿಸುವುದು ಹೇಗೆಂದು ಕಲಿಸುತ್ತಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೀಮ್ ಪೇಜ್ ಹಂಚಿಕೊಂಡಿರುವ ವಿಡಿಯೋದಲ್ಲಿ, ತಾಯಿ ತನ್ನ ಮಗಳಿಗೆ ಚಪಾತಿ ಬೇಯಿಸುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ.
ಚಪಾತಿ ಬೇಯಿಸುತ್ತಿದ್ದ ಮಗಳಿಗೆ ಅದನ್ನು ಒತ್ತುವಂತೆ ತಿಳಿಸಿದ್ದಾಳೆ. ಯುವತಿ ಲಟ್ಟಣಿಗೆಯಲ್ಲಿ ಗಟ್ಟಿಯಾಗಿ ಒತ್ತಿದ್ದಾಳೆ. ಇದ್ರಿಂದ ಕುಪಿತಗೊಂಡ ತಾಯಿ ಕೈಯಿಂದ ತಿರುಗಿಸುವಂತೆ ಆಜ್ಞಾಪಿಸಿದ್ದಾಳೆ. ಆದರೆ, ಈ ರೀತಿ ಚಪಾತಿ ಬೇಯಿಸುವುದರಿಂದ ಮಗಳ ಕೈಗೆ ಬಿಸಿ ತಾಗುತ್ತಿರುವುದರಿಂದ ಆಕೆಗೆ ಮಾಡಲು ಸಾಧ್ಯವಾಗಿಲ್ಲ. ನಂತರ ತಾಯಿ ಚಪಾತಿಯನ್ನು ತಿರುಗಿಸಲು ಹೇಳಿದ್ದಾಳೆ. ಈಕೆ ತವಾವನ್ನು ತಿರುಗಿಸಿದ್ದಾಳೆ. ಈ ವೇಳೆ ಚಪಾತಿ ಒಲೆಗೆ ಬಿದ್ದಿದೆ.
ಇದರಿಂದ ತಾಯಿ ಮತ್ತಷ್ಟು ಸಿಡುಕಿಕೊಂಡ್ರೆ, ಮಗಳು ಮಾತ್ರ ಚಪಾತಿ ಸರಿಯಾಗಿ ಮಾಡಲಾಗದೆ ಹತಾಶೆಗೊಂಡಿದ್ದಾಳೆ. ನೆಟ್ಟಿಗರು ಈ ಉಲ್ಲಾಸದ ವಿಡಿಯೋವನ್ನು ಇಷ್ಟಪಟ್ಟಿದ್ದು, ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.