ದೇಶದ ಎಷ್ಟೋ ನಗರಗಳಲ್ಲಿ ಕುಡಿಯುವ ನೀರಿಗೂ ಬರ. ಬೇಸಿಗೆಯಲ್ಲಂತೂ ಜೀವಜಲಕ್ಕಾಗಿ ಹಾಹಾಕಾರ ಶುರುವಾಗುತ್ತದೆ. ಹಾಗಾಗಿ ಹನಿ ನೀರನ್ನೂ ಪೋಲು ಮಾಡದೇ ಕಾಪಾಡಿಕೊಳ್ಳಬೇಕು. ಅಕಸ್ಮಾತ್ ನೀರನ್ನು ವ್ಯರ್ಥಮಾಡಿದ್ರೆ ಅದಕ್ಕೆ ಶಿಕ್ಷೆಯಾಗಬೇಕು.
ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್, ಜೀವಜಲವನ್ನು ವ್ಯರ್ಥ ಮಾಡುವವರಿಗೆ 5000 ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ. ಇವತ್ತಿನಿಂದ್ಲೇ ಈ ಕಠಿಣ ನಿಯಮ ಜಾರಿಯಾಗಿದೆ. ನೀರು ಪೋಲಾಗದಂತೆ ಉಳಿತಾಯ ಮಾಡಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೀರು ವ್ಯರ್ಥ ಮಾಡುವವರನ್ನು ಪತ್ತೆ ಮಾಡಿ ದಂಡ ಹಾಕಲು ವಿಶೇಷ ತಂಡವನ್ನು ಕೂಡ ರಚಿಸಲಾಗಿದೆ.
ನೀರು ಸರಬರಾಜಾಗುವ ಮಾರ್ಗದಲ್ಲಿ ನೇರವಾಗಿ ಕೆಲವರು ಬೂಸ್ಟರ್ ಪಂಪ್‌ಗಳನ್ನು ಹಾಕಿಬಿಡುತ್ತಾರೆ. ಅದೇನಾದ್ರೂ ಅಧಿಕಾರಿಗಳ ಕಣ್ಣಿಗೆ ಬಿದ್ರೆ ದಂಡ ಹಾಕಲಾಗುತ್ತದೆ. ಇನ್ನು ಮನೆಯ ಮೇಲ್ಛಾವಣಿಯಲ್ಲಿರೋ ತೊಟ್ಟಿಯಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಅದು ತುಂಬಿ ಹರಿದರೂ ದಂಡ ಕಟ್ಟಬೇಕು. ಅನಾವಶ್ಯಕವಾಗಿ ಹನಿ ನೀರು ಕೂಡ ಪೋಲಾಗುವಂತಿಲ್ಲ.
ಸಂಪಿನಿಂದ ನೀರು ಹರಿಯುತ್ತಿರುವುದು ಕಂಡು ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅತ್ತ ಮಹಾರಾಷ್ಟ್ರದಲ್ಲಂತೂ ನೀರಿನ ಕೊರತೆ ಎದುರಾಗಿದೆ. ಜನರು ಹನಿ ನೀರಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕೆಲವರಂತೂ ಬಾವಿಗೇ ಇಳಿಯುತ್ತಿದ್ದಾರೆ. ಈ ಮೂಲಕ ತಮ್ಮ ಪ್ರಾಣಕ್ಕೇ ಅಪಾಯ ತಂದುಕೊಳ್ತಿದ್ದಾರೆ.