ಶೀಘ್ರದಲ್ಲೇ ಭಾರತದಲ್ಲಿ ನೀರೊಳಗಿನ ಸುರಂಗಮಾರ್ಗ ನಿರ್ಮಾಣವಾಗಲಿದೆ. ಇದು ರೈಲು ಸಂಚಾರಕ್ಕಾಗಿ ನಿರ್ಮಾಣವಾಗ್ತಿರೋ ಸುರಂಗ. ಇದನ್ನು ಬ್ರಹ್ಮಪುತ್ರ ನದಿಯೊಳಗೆ ನಿರ್ಮಿಸಲಾಗುವುದು. ರೈಲ್ರೋಡ್ ಸುರಂಗದಲ್ಲಿ ರೈಲುಗಳು ಮತ್ತು ಇತರ ಮೋಟಾರು ವಾಹನಗಳು ಕೂಡ ಚಲಿಸಬಹುದು. ಅಸ್ಸಾಂನ ಮೊದಲ ನೀರೊಳಗಿನ ಸುರಂಗವನ್ನು ನುಮಾಲಿಗಢ ಮತ್ತು ಗೋಪುರ ನಡುವೆ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
ಬ್ರಹ್ಮಪುತ್ರ ನದಿಯನ್ನು ದಾಟಿದ ಈಶಾನ್ಯ ಭಾರತದ ಮೊದಲ ರೈಲು ಸುರಂಗ ಇದಾಗಲಿದೆ. ಅಟಲ್ ಸುರಂಗವನ್ನು ಹೇಗೆ ಪರ್ವತಗಳ ಒಳಗಿನಿಂದ ನಿರ್ಮಿಸಲಾಗಿದೆಯೋ ಅದೇ ರೀತಿ ಬ್ರಹ್ಮಪುತ್ರ ನದಿಯ ಕೆಳಗೆ ಸುರಂಗವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಎರಡು ಪ್ರತ್ಯೇಕ ಸುರಂಗಗಳನ್ನು ಸಿದ್ಧಪಡಿಸಲಾಗುವುದು. ಇವುಗಳಲ್ಲಿ ಒಂದರ ಮೇಲೆ ರೈಲುಗಳು ಚಲಿಸುತ್ತವೆ ಮತ್ತು ಮೋಟಾರು ವಾಹನಗಳು ಇನ್ನೊಂದರಲ್ಲಿ ಚಲಿಸುತ್ತವೆ.
ಈ ಸುರಂಗ ನಿರ್ಮಾಣದ ನಂತರ ನುಮಾಲಿಗಢ್ ಮತ್ತು ಗೋಪುರ ನಡುವಿನ ಅಂತರ ಕೇವಲ 33 ಕಿ.ಮೀ ಆಗಲಿದೆ. ಸದ್ಯ ಇವುಗಳ ನಡುವಿನ ಅಂತರ 220 ಕಿಮೀ ಇದೆ. ಇಲ್ಲಿ ಪ್ರಯಾಣಿಸಲು 5-6 ಗಂಟೆಗಳು ಬೇಕು. ನೀರೊಳಗಿನ ರೈಲ್ವೆ ಸುರಂಗ ನಿರ್ಮಾಣದ ನಂತರ ಕೇವಲ 40 ನಿಮಿಷಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ಸುರಂಗವು ಸುಮಾರು 35 ಕಿಲೋಮೀಟರ್ ಉದ್ದವಿರುತ್ತದೆ.