ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ ವಿಶೇಷ ರಾಗದಿಂದ ಕರೆಯುತ್ತಾರೆ. ಅದಕ್ಕಾಗಿಯೇ ಈ ಪ್ರದೇಶವನ್ನು ‘ಶಿಳ್ಳೆ ಗ್ರಾಮ’ ಅಥವಾ ‘ಹಾಡುವ ಗ್ರಾಮ’ ಎಂದು ಕರೆಯಲಾಗುತ್ತದೆ. ಕೊಂಗ್‌ಥೊಂಗ್, ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿದೆ. ಇದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 60 ಕಿಮೀ ದೂರದಲ್ಲಿದೆ.
ಈ ಗ್ರಾಮದ ಜನರು ತಮ್ಮ ಸಂದೇಶಗಳನ್ನು ಇತರರಿಗೆ ತಿಳಿಸುವ ವಿಧಾನವಾಗಿ ಶಿಳ್ಳೆ ಹೊಡೆಯುತ್ತಾರೆ. ಕಾಂಗ್‌ಥಾಂಗ್‌ನ ಹಳ್ಳಿಗರು ಈ ರಾಗವನ್ನು ʼಜಿಂಗ್ರ್ವಾಯ್ ಲಾಬೀʼ ಎಂದು ಕರೆಯುತ್ತಾರೆ, ಅಂದರೆ ತಾಯಿಯ ಪ್ರೀತಿಯ ಹಾಡು ಎಂದರ್ಥ. ಹಳ್ಳಿಗರಿಗೆ ಎರಡು ಹೆಸರುಗಳಿವೆ – ಒಂದು ಸಾಮಾನ್ಯ ಹೆಸರು ಮತ್ತು ಇನ್ನೊಂದು ಹಾಡಿನ ಹೆಸರು. ಹಾಡಿನ ಹೆಸರುಗಳಲ್ಲಿ ದೀರ್ಘ ಮತ್ತು ಸಣ್ಣ ಹಾಡೆಂಬ ಎರಡು ಆವೃತ್ತಿಗಳಿವೆ. ಸಣ್ಣ ಹಾಡನ್ನು ಸಾಮಾನ್ಯವಾಗಿ ಮನೆಯಲ್ಲಿ ಬಳಸಲಾಗುತ್ತದೆ. ಕಾಂಗ್‌ಥಾಂಗ್‌ನಲ್ಲಿ ಸುಮಾರು 700 ಜನರಿದ್ದಾರೆ. 700 ವಿಭಿನ್ನ ರಾಗಗಳಿವೆ.
ಗ್ರಾಮದಲ್ಲಿ ವ್ಯಕ್ತಿಯನ್ನು ಸಂಬೋಧಿಸಲು ಬಳಸುವ ರಾಗವನ್ನು ತಾಯಂದಿರು ಸಂಯೋಜಿಸಿದ್ದಾರೆ, ಯಾವುದೇ ಗ್ರಾಮಸ್ಥರು ಸತ್ತರೆ, ಅವರೊಂದಿಗೆ ಆ ವ್ಯಕ್ತಿಯ ರಾಗವೂ ಸಾಯುತ್ತದೆ ಎಂಬುದು ಇವರ ನಂಬಿಕೆ. ಹಳ್ಳಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದು ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಉಲ್ಲೇಖಗಳಿಲ್ಲ. 700 ವಿಭಿನ್ನ ಟ್ಯೂನ್‌ಗಳನ್ನು ಸಂವಹನಕ್ಕಾಗಿ ಮಾತ್ರ ಬಳಸಲಾಗುತ್ತಿದೆ. ಯಾರದ್ದೂ ಮೂಲ ಹೆಸರನ್ನು ಕರೆಯುವುದಿಲ್ಲ.
ಪ್ರತಿ ಮಗು ಜನಿಸಿದಾಗಲೂ ಒಂದೊಂದು ಹಾಡು ಹುಟ್ಟಿಕೊಳ್ಳುತ್ತದೆ, ತಾಯಿಯೇ ಅದನ್ನು ರಚಿಸುತ್ತಾಳೆ. ಒಬ್ಬ ವ್ಯಕ್ತಿ ಸತ್ತರೆ ಅವನ ಹಾಡು ಅಥವಾ ಟ್ಯೂನ್ ಸಹ ಸಾಯುತ್ತದೆ, ಆ ಹಾಡು ಅಥವಾ ಟ್ಯೂನ್ ಅನ್ನು ಮತ್ತೆ ಎಂದಿಗೂ ಬಳಸಲಾಗುವುದಿಲ್ಲ. ಈಗ ಮೇಘಾಲಯದ ಇತರ ಕೆಲವು ಹಳ್ಳಿಗಳ ಜನರು ಸಹ ಈ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರಂತೆ. ಕಳೆದ ವರ್ಷ ಪ್ರವಾಸೋದ್ಯಮ ಸಚಿವಾಲಯ ಕೊಡಮಾಡುವ ಅತ್ಯುತ್ತಮ ಗ್ರಾಮವೆಂಬ ಪ್ರಶಸ್ತಿಗೂ ಕೊಂಗ್‌ಥೊಂಗ್ ಆಯ್ಕೆಯಾಗಿತ್ತು.