ಸಾಮಾನ್ಯವಾಗಿ ಶಾಲೆ, ಕಾಲೇಜುಗಳ ಎದುರು ಚಾಟ್ ಸೆಂಟರ್, ಜ್ಯೂಸ್ ಅಂಗಡಿ, ಐಸ್‌ಕ್ರೀಂ ಪಾರ್ಲರ್‌ಗಳಿರುತ್ತವೆ. ಆದ್ರೆ ಲಖ್ನೋ ಶಾಲೆಯ ಮಕ್ಕಳಿಗೆ ಇನ್ಮೇಲೆ ಚಾಟ್ಸ್, ಐಸ್‌ಕ್ರೀಂ ಯಾವುದೂ ಸಿಗೋದಿಲ್ಲ. ಯಾಕಂದ್ರೆ ಈ ರೀತಿ ಶಾಲೆಗಳ ಹೊರಗೆ ಐಸ್ ಕ್ರೀಮ್ ಮತ್ತು ಫಾಸ್ಟ್ ಫುಡ್ ಮಾರಾಟ ಮಾಡದಂತೆ ಲಖ್ನೋದ ಅಧಿಕಾರಿಗಳು ಖಡಕ್ ಆದೇಶ ಹೊರಡಿಸಿದ್ದಾರೆ. ಶಾಲೆಗಳ ಬಳಿ ಟ್ರಾಫಿಕ್ ಜಾಮ್ ಆಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಶಾಲೆಗಳ ನೋಡಲ್ ಅಧಿಕಾರಿಗಳು, ನಗರ ಸಂಚಾರ ಪೊಲೀಸರು ಮತ್ತು ಜಿಲ್ಲಾಡಳಿತದ ನಡುವಣ ಚರ್ಚೆಯ ನಂತರ ಪೀಕ್ ಅವರ್‌ನಲ್ಲಿ ಶಾಲೆಯ ಸುತ್ತಮುತ್ತ ಟ್ರಾಫಿಕ್ ತಪ್ಪಿಸಲು ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಮಾರ್ಗಸೂಚಿಗಳ ಪ್ರಕಾರ ಶಾಲಾ ಸಮಯದ ನಂತರ ಟ್ರಾಫಿಕ್ ಜಾಮ್ ಉಂಟುಮಾಡುವ ಐಸ್ ಕ್ರೀಮ್, ಚಾಟ್, ಬಲೂನ್ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲು ಶಾಲೆಗಳ ಸುತ್ತಲೂ ಯಾವುದೇ ಅಂಗಡಿ ಅಥವಾ ಕಾರ್ಟ್ಗೆ ಅನುಮತಿ ಇಲ್ಲ.
ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡುವ ಬದಲು ನೇರವಾಗಿ ತಮ್ಮ ಶಾಲಾ ಕ್ಯಾಬ್ ಅಥವಾ ಬಸ್‌ನಲ್ಲಿ ಕುಳಿತುಕೊಳ್ಳಬೇಕು. ಮಕ್ಕಳನ್ನು ಕರೆತರಲು ಶಾಲೆಗೆ ಭೇಟಿ ನೀಡುವ ಪೋಷಕರು ತಮ್ಮ ವಾಹನಗಳನ್ನು ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಬೇಕು. ಶಾಲೆಯ ಸಮಯ ಮುಗಿದ ತಕ್ಷಣ ಪೋಷಕರು ಗೇಟ್ ಬಳಿ ಬರಬಹುದು.
ಅಲ್ಲಿ ಕಾಲಹರಣ ಮಾಡದೇ ತಮ್ಮ ತಮ್ಮ ಮಕ್ಕಳನ್ನು ಬೇಗನೆ ಅಲ್ಲಿಂದ ಕರೆದುಕೊಂಡು ಹೋಗಬೇಕು. ಸಂಚಾರಕ್ಕೆ ಅಡಚಣೆಯಾಗದಂತೆ ಆ ಪ್ರದೇಶದಿಂದ ತೆರಳಬೇಕೆಂದು ಸೂಚಿಸಲಾಗಿದೆ. ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ಪೋಷಕರು ಹಾಗೂ ಶಿಕ್ಷಕರ ಸಭೆಯ ಸಮಯದಲ್ಲಿ ಈ ಮಾರ್ಗಸೂಚಿಗಳ ಬಗ್ಗೆ ಎಲ್ಲಾ ಶಾಲೆಗಳು ಪೋಷಕರಿಗೆ ತಿಳಿಸಬೇಕೆಂದು ಆದೇಶಿಸಲಾಗಿದೆ.