ಕೂದಲು ಮತ್ತು ಚರ್ಮದ ಜೊತೆಜೊತೆಗೆ ಹಲ್ಲುಗಳ ಬಗೆಗೂ ಕಾಳಜಿ ವಹಿಸಲೇಬೇಕು. ಹಲ್ಲುಗಳ ಆರೈಕೆ ಮತ್ತು ರೋಗಗಳಿಂದ ಅವುಗಳನ್ನು ರಕ್ಷಿಸಲು ಅತ್ಯಂತ ಸರಳ ಉಪಾಯಗಳಿವೆ.
ಸಾಮಾನ್ಯವಾಗಿ ಹಲ್ಲುಗಳಿಗೆ ಕಾಡುವ ರೋಗಗಳು ನಮ್ಮನ್ನು ಹೈರಾಣಾಗಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಕಾಪಾಡಿಕೊಳ್ಳಲು ಫ್ಲೋರೈಡ್ ಯುಕ್ತ ಟೂತ್ ಪೇಸ್ಟ್ ಬಳಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಇದು ಕ್ಯಾವಿಟಿಯನ್ನು ದೂರ ಮಾಡಿ ದಂತಕವಚ ಪದರವನ್ನು ಕಾಪಾಡುತ್ತದೆ. ಹಲ್ಲುಗಳು ಚೆನ್ನಾಗಿರಬೇಕೆಂದ್ರೆ ನೀವು ತಣ್ಣಗಿನ ಆಹಾರ, ಹುಳಿ ಹುಳಿ ಪದಾರ್ಥ, ಪ್ಯಾಕ್ಡ್ ಕೂಲ್ ಡ್ರಿಂಕ್ಸ್, ಅತಿಯಾಗಿ ಸಕ್ಕರೆ, ಕ್ಯಾಂಡಿ, ಚಾಕಲೇಟ್ ಮತ್ತು ಆಮ್ಲೀಯ ದ್ರವವಸ್ತುಗಳನ್ನು ಹೆಚ್ಚಾಗಿ ಸೇವಿಸಬಾರದು.
ಪ್ರತಿ ಆರು ತಿಂಗಳಿಗೊಮ್ಮೆ ದಂತ ತಜ್ಞರ ಬಳಿ ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಿ. ಇದರಿಂದ ವಸಡು ಸ್ವಚ್ಛ ಮತ್ತು ಆರೋಗ್ಯಕರವಾಗಿರುತ್ತದೆ. ಹಲ್ಲುಗಳಲ್ಲಿ ಕ್ಯಾವಿಟಿ ಇದ್ದರೆ ತಕ್ಷಣವೇ ವೈದ್ಯರ ಗಮನಕ್ಕೆ ಬರುತ್ತದೆ. ಅಷ್ಟೇ ಅಲ್ಲ ಹಲ್ಲುಗಳಿಗೆ ಯಾವುದಾದ್ರೂ ರೋಗ ತಗುಲಿದ್ರೆ ಅದನ್ನೂ ಪತ್ತೆ ಹಚ್ಚಬಹುದು.
ಇಂಟರ್ ಡೆಂಟಲ್ ಬ್ರಷ್ ಗಳನ್ನೇ ಬಳಸಿ. ನಿಧಾನವಾಗಿ ಹಲ್ಲುಗಳ ಮೇಲ್ಮೈ ಮತ್ತು ಒಳಭಾಗದಲ್ಲಿ ಬ್ರಷ್ ಮಾಡಿ. ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ಉತ್ತಮ. ಹಲ್ಲುಗಳ ಕಸಿ ಮಾಡಿಸಿಕೊಂಡವರು ವರ್ಷಕ್ಕೊಮ್ಮೆ ಅದನ್ನು ಸ್ವಚ್ಛಗೊಳಿಸಲು ಡೆಂಟಿಸ್ಟ್ ಗಳ ಬಳಿಗೆ ಹೋಗಬೇಕು.