alex Certify ಇಲ್ಲಿದೆ ಶಿವಮೊಗ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಶಿವಮೊಗ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ

ರಾಜ್ಯ ವಿಧಾನಸಭಾ ಫಲಿತಾಂಶ ಹೊರ ಬಿದ್ದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನ ಹೆಚ್ಚಿಸಿಕೊಂಡಿದೆ. ಬಿಜೆಪಿ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದೆ.

ಶಿವಮೊಗ್ಗ

ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದ ಎಸ್.ಎನ್. ಚನ್ನಬಸಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹೆಚ್.ಸಿ. ಯೋಗೇಶ್ ಅವರನ್ನು ಪರಾಭವಗೊಳಿಸಿದ್ದಾರೆ. ಚನ್ನಬಸಪ್ಪ 95,399 ಮತ ಪಡೆದರೆ, ಯೋಗೇಶ್ 68,071 ಮತ ಗಳಿಸಿದ್ದಾರೆ. ಸುಮಾರು 27 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಇನ್ನು ಜೆಡಿಎಸ್ ನಿಂದ ಅಖಾಡಕ್ಕೆ ಇಳಿದಿದ್ದ ಆಯನೂರು ಮಂಜುನಾಥ್ ಕೇವಲ 8623 ಮತ ಪಡೆದು ಹೀನಾಯವಾಗಿ ಸೋಲು ಕಂಡಿದ್ದಾರೆ.

ಶಿಕಾರಿಪುರ

ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಬಿಜೆಪಿಯಿಂದ ಗೆಲುವು ಪಡೆಯುವುದು ಬಹುತೇಕ ಖಚಿತವಾಗಿದೆ. ಬಿವೈ ವಿಜಯೇಂದ್ರ 81015 ಮತ ಪಡೆದಿದ್ದರೆ, ಪ್ರತಿಸ್ಪರ್ಧಿ ಹಾಗೂ ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡ 70371 ಮತ ಪಡೆದು ವಿಜಯೇಂದ್ರ ವಿರುದ್ಧ ಗಮನಾರ್ಹ ಸಾಧನೆ ತೋರಿದ್ದಾರೆ. ಬಿ.ವೈ. ವಿಜಯೇಂದ್ರ 10,644 ಮತಗಳ ಅಂತರದಲ್ಲಿ ಜಯಗಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ತೀರ್ಥಹಳ್ಳಿ

ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ 12,088 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.

ಜ್ಞಾನೇಂದ್ರ 83871 ಮತ ಪಡೆದರೆ, ಕಿಮ್ಮನೆ 71791 ಮತ ಗಳಿಸಿದ್ದಾರೆ. ಇಲ್ಲಿ ಜೋಡೆತ್ತುಗಳಂತೆ ಚುನಾವಣೆ ಸಂದರ್ಭದಲ್ಲಿ ಶ್ರಮಿಸಿದ ಕಿಮ್ಮನೆ ಹಾಗೂ ಆರ್.ಎಂ. ಮಂಜುನಾಥ್ ಗೌಡ ಅವರ ತಂತ್ರ ಫಲಿಸಿಲ್ಲ.

ಸಾಗರ

ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಗೋಪಾಲಕೃಷ್ಣ ಬೇಳೂರು ,ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಹರತಾಳು ಹಾಲಪ್ಪ ಅವರನ್ನು ಸುಮಾರು 15,916 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ 88143 ಮತ ಪಡೆದರೆ, ಹಾಲಪ್ಪ 72227 ಮತ ಪಡೆದಿದ್ದಾರೆ.

ಭದ್ರಾವತಿ

ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಹಾಗೂ ಜೆಡಿಎಸ್ ನ ಶಾರದ ಅಪ್ಪಾಜಿಗೌಡ ವಿರುದ್ಧ ತೀವ್ರ ಪೈಪೋಟಿ ನಡೆದಿದೆ.

ಸಂಗಮೇಶ್ವರ 61981 ಮತ ಪಡೆದರೆ, ಶಾರದ ಅಪ್ಪಾಜಿ 58318 ಮತ ಪಡೆದಿದ್ದಾರೆ. 3500ಕ್ಕೂ ಹೆಚ್ಚು ಮತಗಳ ಅಂತರದಿಂದ ಶಾರದ ಹಿನ್ನಡೆ ಅನುಭವಿಸಿದ್ದಾರೆ.

ಸೊರಬ

ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ತಮ್ಮ ಸಹೋದರ ಹಾಗೂ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ವಿರುದ್ಧ ಸುಮಾರು 43921 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಮಧು ಬಂಗಾರಪ್ಪ 97232 ಮತ ಪಡೆದರೆ, ಕುಮಾರ್ ಬಂಗಾರಪ್ಪ 54311 ಮತ ಪಡೆಯಲಷ್ಟೇ ಶಕ್ತರಾಗಿದ್ದಾರೆ.

ಶಿವಮೊಗ್ಗ ಗ್ರಾಮಾಂತರ

ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಶಾರದಾ ಪೂರ್ಯಾ ನಾಯ್ಕ್ ಅವರಿಗೆ ಈ ಬಾರಿ ಮತದಾರರು ಒಲವು ತೋರಿದ್ದಾರೆ. ಕ್ಷೇತ್ರದಲ್ಲಿ ಶಾರದಾ ಪೂರ್ಯ ನಾಯಕ್ 83,558 ಮತ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿಯ ಅಶೋಕ್ ನಾಯ್ಕ್ 68310 ಮತ ಪಡೆದಿದ್ದಾರೆ. ಕ್ಷೇತ್ರದಲ್ಲಿ ಶಾರದಾ ಪೂರ್ಯಾ ನಾಯ್ಕ್ ಸುಮಾರು 15 ಸಾವಿರ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

(ಎಲ್ಲ ಕ್ಷೇತ್ರಗಳ ವಿವರ ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...