ಮಿಯಾಝಾಕಿ ಮಾವು ವಿಶ್ವದ ಅತ್ಯಂತ ದುಬಾರಿ ಮಾವುಗಳಲ್ಲಿ ಒಂದಾಗಿದ್ದು, ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.70 ಲಕ್ಷ ರೂ.ಗೆ ಮಾರಾಟವಾಗಿತ್ತು. ಈ ಮಾವುಗಳನ್ನು ತೈಯೊ-ನೋ-ಟೊಮಾಗೊ ಅಥವಾ ಎಗ್ಸ್ ಆಫ್ ಸನ್‌ಶೈನ್ ಎಂದು ಹೆಸರಿಟ್ಟು ಮಾರಾಟ ಮಾಡಲಾಗುತ್ತದೆ. ಇದು ಹಳದಿ ಅಥವಾ ಹಸಿರು ಬಣ್ಣದಲ್ಲಿರುವುದಿಲ್ಲ.
ಮಾಗಿದ ನಂತರ ನೇರಳೆ ಬಣ್ಣದಿಂದ ಕೆಂಪಗೆ ತಿರುಗುತ್ತದೆ. ಇದರ ಆಕಾರವು ಡೈನೋಸಾರ್‌ನ ಮೊಟ್ಟೆಗಳಂತೆ ಕಾಣುತ್ತದೆ. ಅದರ ಕೆಂಪು ಬಣ್ಣದಿಂದಾಗಿ ಈ ಮಿಯಾಝಾಕಿ ಮಾವಿನಹಣ್ಣುಗಳನ್ನು ಡ್ರ್ಯಾಗನ್ ಮೊಟ್ಟೆ ಎಂದೂ ಕರೆಯುತ್ತಾರೆ. ವರದಿಗಳ ಪ್ರಕಾರ, ಈ ಮಾವಿನಹಣ್ಣು 350 ಗ್ರಾಂ ತೂಕವನ್ನು ಹೊಂದಿರುತ್ತವೆ. ಹಾಗೂ 15 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತವೆ.
ಮಿಯಾಝಾಕಿ ಮಾವು ಎಲ್ಲಿ ಬೆಳೆಯಲಾಗುತ್ತದೆ..?
ಮಿಯಾಝಾಕಿ ಮಾವಿನ ಹಣ್ಣನ್ನು ಹೆಚ್ಚು ಉತ್ಪಾದಿಸುವ ದೇಶ ಜಪಾನ್. ಮಿಯಾಝಾಕಿ ಮಾವುಗಳನ್ನು ಮುಖ್ಯವಾಗಿ ಜಪಾನ್‌ನ ಕ್ಯುಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಮಿಯಾಝಾಕಿಯಲ್ಲಿ ಈ ಮಾವಿನ ಉತ್ಪಾದನೆಯು 70 ಮತ್ತು 80 ರ ದಶಕದಲ್ಲಿ ಪ್ರಾರಂಭವಾಯಿತು. ಬೆಚ್ಚನೆಯ ವಾತಾವರಣ, ಸುದೀರ್ಘವಾದ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯೊಂದಿಗೆ ಈ ಮಾವಿನ ಉತ್ಪಾದನೆಗೆ ನಗರವು ಅನುಕೂಲಕರ ವಾತಾವರಣವನ್ನು ಹೊಂದಿದೆ.
ಇದೀಗ ಭಾರತದಲ್ಲೂ ಮಿಯಾಝಾಕಿ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿನ ದಂಪತಿಗಳು ತಮ್ಮ ತೋಟದಲ್ಲಿ ಎರಡು ಮಿಯಾಝಾಕಿ ಮಾವಿನ ಮರಗಳನ್ನು ನೆಟ್ಟಿದ್ದರು. ಅವರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ ಸಸಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರು ಸಸಿಗಳನ್ನು ಸ್ವೀಕರಿಸುವ ಸಮಯದಲ್ಲಿ, ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ತಿಳಿದಿರಲಿಲ್ಲ. ನಂತರ ಅವರು ಮಾವಿನ ಬಣ್ಣ ವಿಭಿನ್ನವಾಗಿದೆ ಎಂದು ಅದರ ಬಗ್ಗೆ ತಿಳಿಯಲು ಹೊರಟಾಗ ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂಬುದು ಅವರಿಗೆ ಗೊತ್ತಾಗಿದೆ. ಇದೀಗ ಅವರು ಈ ಮಾವಿನಹಣ್ಣುಗಳನ್ನು ದಾಮಿನಿ ಎಂದು ಕರೆಯುತ್ತಾರೆ.