![](https://kannadadunia.com/wp-content/uploads/2018/11/baingan-masala-brinjal-masala.jpg)
ಬದನೆಕಾಯಿ ಮಸಾಲಾ, ರೋಟಿ, ನಾನ್ ಮತ್ತು ಚಪಾತಿ ಜೊತೆಗೆ ಒಳ್ಳೆಯ ಕಾಂಬಿನೇಷನ್. ಜೀರಾ ರೈಸ್ ಜೊತೆಗೂ ನೀವು ಇದನ್ನು ಟೇಸ್ಟ್ ಮಾಡಬಹುದು. ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ರೆಸ್ಟೋರೆಂಟ್ ಸ್ಟೈಲ್ ನ ಕರಿ ಇದು. ಪಾರ್ಟಿಗಳಲ್ಲಿ ಸ್ಪೆಷಲ್ಲಾಗಿ ಇದನ್ನು ನಿಮ್ಮ ಅತಿಥಿಗಳಿಗಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿ : ಚಿಕ್ಕ ಗಾತ್ರದ 6 ಬದನೆಕಾಯಿ, 3 ಚಮಚ ಎಣ್ಣೆ, ಅರ್ಧ ಚಮಚ ಸಾಸಿವೆ, ಕಾಲು ಚಮಚ ಮೆಂತೆ, ನಾಲ್ಕಾರು ಕರಿಬೇವಿನ ಎಲೆ, ಸಣ್ಣದಾಗಿ ಹೆಚ್ಚಿದ ಒಂದು ಈರುಳ್ಳಿ, ಒಂದು ಕಪ್ ಹುಣಿಸೆಹಣ್ಣಿನ ರಸ, ಅರ್ಧ ಚಮಚ ಬೆಲ್ಲ, ಸಣ್ಣಗೆ ಹೆಚ್ಚಿದ 2 ಚಮಚ ಕೊತ್ತಂಬರಿ ಸೊಪ್ಪು.
ಈರುಳ್ಳಿ-ಟೊಮೆಟೋ ಪೇಸ್ಟ್ ತಯಾರಿಸಲು 2 ಚಮಚ ಎಣ್ಣೆ, ಸ್ಲೈಸ್ ಮಾಡಿದ ಒಂದು ಈರುಳ್ಳಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಅರಿಶಿನ ಪುಡಿ, ಸಣ್ಣಗೆ ಹೆಚ್ಚಿದ ಒಂದು ಟೊಮೆಟೋ, 1 ಚಮಚ ಧನಿಯಾ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಒಂದು ಚಮಚ ಅಚ್ಚಖಾರದ ಪುಡಿ, ಅರ್ಧ ಚಮಚ ಗರಂ ಮಸಾಲಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು. ಸ್ಟಫಿಂಗ್ ಗಾಗಿ 2 ಚಮಚ ಎಳ್ಳು, ಅರ್ಧ ಒಣ ಕೊಬ್ಬರಿ, ಕಾಲು ಕಪ್ ಹುರಿದ ಶೇಂಗಾ, ಒಂದು ಚಮಚ ಅಚ್ಚಖಾರದ ಪುಡಿ, ಉಪ್ಪು.
ತಯಾರಿಸುವ ವಿಧಾನ : ಬದನೆಕಾಯಿಯನ್ನು ಸೀಳಿಕೊಳ್ಳಿ, ಅದನ್ನು ನೀರಿನಲ್ಲಿ ಹಾಕಿ ಪಕ್ಕಕ್ಕಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಕೈಯಾಡಿಸಿ. ಬಳಿಕ ಅರಿಶಿನ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲಾ, ಉಪ್ಪು ಹಾಕಿ ತೊಳಸಿ.
ಅದು ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಹಾಕಿಕೊಂಡು ಮೃದುವಾದ ಪೇಸ್ಟ್ ನಂತೆ ರುಬ್ಬಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಳ್ಳು ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಕೊಬ್ಬರಿ ತುರಿ ಹಾಕಿ ಕೈಯಾಡಿಸಿ. ಹುರಿದಿಟ್ಟ ಶೇಂಗಾ, ಅಚ್ಚಖಾರದ ಪುಡಿ, ಉಪ್ಪು ಹಾಕಿ ಹುರಿಯಿರಿ. ಗ್ಯಾಸ್ ಆಫ್ ಮಾಡಿ, ಮಿಶ್ರಣ ತಣ್ಣಗಾದ ಬಳಿಕ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಸೀಳಿ ಇಟ್ಟುಕೊಂಡಿದ್ದ ಬದನೆಕಾಯಿಯಲ್ಲಿ ಈ ಮಿಶ್ರಣವನ್ನು ತುಂಬಿಸಿ.
ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಸ್ಟಫ್ ಮಾಡಿದ ಬದನೆಕಾಯಿಯನ್ನು ಹುರಿಯಿರಿ. ಬದನೆಕಾಯಿ ಮೆತ್ತಗಾದ ಬಳಿಕ ಹೊರಕ್ಕೆ ತೆಗೆದಿಡಿ. ಅದೇ ಎಣ್ಣೆಯಲ್ಲಿ ಸಾಸಿವೆ, ಮೆಂತೆ, ಕರಿಬೇವು, ಈರುಳ್ಳಿ ಹಾಕಿ ವಗ್ಗರಣೆ ಮಾಡಿ. ಅದಕ್ಕೆ ಮೊದಲೇ ಮಾಡಿಟ್ಟುಕೊಂಡಿದ್ದ ಪೇಸ್ಟ್ ಹಾಕಿ. ಚೆನ್ನಾಗಿ ಕೈಯಾಡಿಸಿದ ಬಳಿಕ ಬದನೆಕಾಯಿ, ಹುಣಿಸೆಹಣ್ಣಿನ ರಸ, ಬೆಲ್ಲ ಹಾಕಿ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿ 10-12 ನಿಮಿಷ ಮುಚ್ಚಿ ಬೇಯಿಸಿ. ಬದನೆಕಾಯಿ ಮಸಾಲಾ ಸವಿಯಲು ಸಿದ್ಧ.