ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿ ಎಸ್-ಸಿಎನ್ ಜಿ ತಂತ್ರಜ್ಞಾನ ಹೊಂದಿರುವ ಹೊಸ ಡಿಸೈರ್ ಕಾರನ್ನು ಬಿಡುಗಡೆ ಮಾಡಿದೆ. ಆಧುನಿಕ ಕೆ-ಸರಣಿಯ ಡ್ಯೂಯೆಲ್ ಜೆಟ್, ಡ್ಯೂಯೆಲ್ ವಿವಿಟಿ 1.2 ಲೀಟರ್ ಎಂಜಿನ್ ಈ ಕಾರಿನಲ್ಲಿದೆ.
ಡಿಸೈರ್ ಎಸ್-ಸಿಎನ್ ಜಿ ಹೆಸರಿನ ಈ ಕಾರು 31.12 ಕಿಮೀ ಮೈಲೇಜ್ ಕೊಡುತ್ತದೆ. ಮಾರುತಿ ಸುಜುಕಿಗೆ ಭಾರತದಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚು ಗ್ರಾಹಕರಿದ್ದಾರೆ. ಉಭಯ ಪರಸ್ಪರ ಅವಲಂಬಿತ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕಗಳು (ECU) ಮತ್ತು ಉತ್ತಮ ಉಳಿತಾಯದೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುವ ಗಾಳಿ-ಇಂಧನ ಅನುಪಾತವನ್ನು ಒದಗಿಸಲು ಇಂಜೆಕ್ಷನ್ ವ್ಯವಸ್ಥೆ ಹೊಸ ಕಾರಿನ ವಿಶೇಷತೆ.
ಸ್ಟೇನ್ಲೆಸ್ ಸ್ಟೀಲ್ ಪೈಪ್ ಹಾಗೂ ಜಾಯಿಂಟ್ ಗಳನ್ನು ಅಳವಡಿಸಿರುವುದರಿಂದ ಇದು ಅತ್ಯಂತ ಸುರಕ್ಷಿತ ಕಾರುಗಳಲ್ಲೊಂದು ಅಂತಾ ಹೇಳಲಾಗ್ತಿದೆ. ಯಾವುದೇ ರೀತಿಯ ಲೀಕೇಜ್ ಹಾಗೂ ತುಕ್ಕಿನ ಸಮಸ್ಯೆ ಇದರಲ್ಲಿ ಇರುವುದಿಲ್ಲ ಅಂತಾ ಕಂಪನಿ ಹೇಳಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಂತಹ ಸಮಸ್ಯೆ ತಡೆಯಲು ಸಂಯೋಜಿತ ತಂತಿಗಳನ್ನು ಸಹ ಬಳಸಲಾಗಿದೆ.
ಇದರಲ್ಲಿ ಮೈಕ್ರೋಸ್ವಿಚ್ ಇರುವುದರಿಂದ ಇಂಧನ ತುಂಬಿಸುವ ಪ್ರಕ್ರಿಯೆ ಸಂದರ್ಭದಲ್ಲಿ ಕಾರು ಸ್ಟಾರ್ಟ್ ಆಗುವುದಿಲ್ಲ. ಇದು ಇಕೋ ಫ್ರೆಂಡ್ಲಿ, ಫ್ಯಾಕ್ಟರಿ ಫಿಟ್ಟೆಡ್ ಹಾಗೂ ಅತ್ಯಂತ ಸೇಫ್ ವಾಹನ ಅಂತಾ ಕಂಪನಿ ಹೇಳಿಕೊಂಡಿದೆ. ಮಾರುತಿ ಸುಜುಕಿ ಡಿಸೈರ್ ಎಸ್-ಸಿಎನ್ ಜಿ ಕಾರಿನ ಆರಂಭಿಕ ಬೆಲೆ 8.14 ಲಕ್ಷ ರೂಪಾಯಿ. ಇದರ ಹೈಯರ್ ಮಾಡೆಲ್ ಬೇಕಂದ್ರೆ 8.82 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.